ಕಾಸರಗೋಡು: ಕೋವಿಡ್ ಪ್ರತಿರೋಧ ಜಾಗೃತಿ ಅಂಗವಾಗಿ ತಲಾ ಒಂದು ನಿಮಿಷ ಅವಧಿಯ ಹತ್ತು ಕಿರು ಸಾಕ್ಷ್ಯಚಿತ್ರಗಳು ನಿರ್ಮಾಣಗೊಳ್ಳಲಿವೆ.
ಜಿಲ್ಲಾಡಳಿತೆಗಾಗಿ ರಂಗಕರ್ಮಿ, ಚಿತ್ರ ನಿರ್ದೇಶಕ ಗೋಪಿ ಕುತ್ತಿಕೋಲು ಮತ್ತು ಬಳಗ ಈ ಸಾಕ್ಷ್ಯಚಿತ್ರ ತಯಾರಿಸುತ್ತಿದೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆಯು ಐ.ಎ.ಸಿ. ಸಂಚಲನ ಸಮಿತಿ ಮೂಲಕ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳ ಅಂಗವಾಗಿ ಈ ಕಿರು ಸಾಕ್ಷ್ಯಚಿತ್ರಗಳ ನಿರ್ಮಾಣ ನಡೆಯಲಿದೆ.
ಚಿತ್ರೀಕರಣದ ಸ್ವಿಚ್ ಆನ್ ಕಾರ್ಯಕ್ರಮ ನುಳ್ಳಿಪ್ಪಾಡಿಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಿಚ್ ಆನ್ ನಡೆಸಿದರು. ಆರೋಗ್ಯ ವಲಯದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಡಾ.ಜನಾರ್ದನ ನಾಯ್ಕ್ ಸಹಿತ ಕಾರ್ಯಕರ್ತರು ಈ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜಯನ್ ಮೋಹನನ್ ಸಹಾಯಕ ನಿರ್ದೇಶಕರಾಗಿದ್ದಾರೆ. ಸುನಿಲ್ ಪುಲರಿ ಮತ್ತು ಬಳಗ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಉದಯನ್ ಕಾಡಗಂ, ನೆಪ್ಚ್ಯೂನ್ ಚೌಕಿ, ಅನಾಮಿಕಾ, ಅನು ಋತುವರ್ಣ ಮೊದಲಾದವರು ಅಭಿನಯಿಸುತ್ತಿದ್ದಾರೆ. ಸ್ವಿಚ್ ಆನ್ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಟಿ.ಎ.ಶಾಫಿ, ರೋಟರಿ ಕ್ಲಬ್ ಜಿಲ್ಲಾ ಆಡಳಿತಾತ್ಮಕ ಕಾರ್ಯದರ್ಶಿ ಎಂ.ಕೆ.ರಾಧಾಕೃಷ್ಣನ್, ಅಶೋಕನ್ ಕುಣಿಯೇರಿ, ಸಂತೋಷ್ ಸಕಾರಿಯಾ, ಅಜಯನ್ ಕಯ್ಯೂರು ಮೊದಲಾದವರು ಉಪಸ್ಥಿತರಿದ್ದರು. ಗೋಪಿ ಕುತ್ತಿಕೋಲು ಸ್ವಾಗತಿಸಿದರು.





