ತಿರುವನಂತಪುರ: ಕೋವಿಡ್ ಲಸಿಕೆಯ ಎರಡನೇ ಹಂತದಲ್ಲಿ ಕೇರಳಕ್ಕೆ 3,60,500 ಡೋಸ್ ಕೋವಿಶೀಲ್ಡ್ ಲಸಿಕೆ ಮಂಜೂರು ಮಾಡಲಾಗಿದೆ ಎಂದು ಸಚಿವೆ ಕೆ.ಕೆ.ಶೈಲಾಜಾ ಮಾಹಿತಿ ನೀಡಿರುವರು. ಮೊದಲ ಹಂತದಲ್ಲಿ ಒಟ್ಟು 4,33,500 ಡೋಸ್ ಲಸಿಕೆ ರಾಜ್ಯವನ್ನು ತಲುಪಿದೆ. ಇದರೊಂದಿಗೆ ರಾಜ್ಯಕ್ಕೆ ಒಟ್ಟು 7,94,000 ಡೋಸ್ ಲಸಿಕೆಗಳು ಸಿಗಲಿವೆ.
ಆಲಪ್ಪುಳ 19,000, ಎರ್ನಾಕುಳಂ 59,000, ಇಡುಕ್ಕಿ 7,500, ಕಣ್ಣೂರು 26,500, ಕಾಸರಗೋಡು 5,500, ಕೊಲ್ಲಂ 21,000, ಕೊಟ್ಟಾಯಂ 24,000, ಕೋಝಿಕೋಡ್ 33,000, ಮಲಪ್ಪುರಂ 25,000, ಪಾಲಕ್ಕಾಡ್ 25,500, ಪತ್ತನಂತಿಟ್ಟು 19,000, ತಿರುವನಂತಪುರ 14 ಸಾವಿರ,ತೃಶೂರ್ 31 ಸಾವಿರ, ವಯನಾಡು 14 ಸಾವಿರ ಲಸಿಕೆಗಳು ಲಭ್ಯವಾಗುತ್ತವೆ.
ಲಸಿಕೆಗಳು ಇಂದು ಎರ್ನಾಕುಳಂ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳಿಗೆ ತಲುಪಲಿವೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಲಸಿಕೆ ಹಾಕಿದ ಮೂರನೇ ದಿನ 8,548 ಮಂದಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆದರು. ಮೊದಲ ದಿನ 8062 ಜನರಿಗೆ ಲಸಿಕೆ ನೀಡಲಾಯಿತು, ನಂತರ ಭಾನುವಾರ 57 ಮತ್ತು ಸೋಮವಾರ 7891 ಜನರಿಗೆ ಲಸಿಕೆ ನೀಡಲಾಯಿತು. ಇದರೊಂದಿಗೆ ಒಟ್ಟು 24,558 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಲಸಿಕೆಯೊಂದಿಗೆ ಇದುವರೆಗೆ ಯಾವುದೇ ಅಡ್ಡಪರಿಣಾಮಗಳು ವರದಿಯಾಗಿಲ್ಲ ಎಂದು ಮಾಹಿತಿ ನೀಡಿರುವರು.





