ಕಾಸರಗೋಡು: ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಅಂತಾರಾಜ್ಯ ಸಂಚಾರದ ಎಲ್ಲ ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ಮಂಜೂರುಗೊಳಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಸೀಮಿತವಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳೂ ಮಂಗಳೂರು ಹಾಗೂ ದ.ಕ ಜಿಲ್ಲೆಯ ಇತರ ಕೇಂದ್ರಗಳನ್ನು ಆಶ್ರಯಿಸುತ್ತಿದ್ದಾರೆ.
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳು ಮಾತ್ರ ಸಂಚಾರ ನಡೆಸುತ್ತಿದೆ. ಪ್ಯಾಸೆಂಜರ್ ರೈಲುಗಳೂ ಓಡಾಟ ಆರಂಭಿಸದಿರುವ ಹಿನ್ನೆಲೆಯಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಹಾಸ್ಟೆಲ್‍ಗಳಲ್ಲಿ ವಾಸ್ತವ್ಯಹೂಡಬೇಕಾದ ಅನಿವಾರ್ಯತೆಯಿದೆ. ಅದೆಷ್ಟೋ ಕುಟುಂಬ ಹೆಚ್ಚಿನ ಬಸ್ ದರ ಹಾಗೂ ಹಾಸ್ಟೆಲ್ ಶುಲ್ಕ ನೀಡಲಾಗದೆ ಕಂಗಾಲಾಗಿದ್ದು, ಈ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್ ಒದಗಿಸಲು ಮುಂದಾಗಬೇಕು. ಈ ಬಗ್ಗೆ ಮುಖ್ಯ ಮಂತ್ರಿಗೂ ಮನವಿ ಸಲ್ಲಿಸಿರುವುದಾಗಿ ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




