ಕಾಸರಗೋಡು: ಕೇಂದ್ರ-ರಾಜ್ಯ ಸರ್ಕಾರಗಳ ಸೇವೆ ಸಹಿತ ಉದ್ಯೋಗ ವಲಯಗಳಿಗೆ ಅಲ್ಪಸಂಖ್ಯಾತರನ್ನು ಸಹಕಾರ ನೀಡಿ ಕರೆತರುವ ನಿಟ್ಟಿನಲ್ಲಿ ಉಚಿತ ತರಬೇತಿ ಕೇಂದ್ರವಾಗಿರುವ 'ಕೋಚಿಂಗ್ ಸೆಂಟರ್ ಫಾರ್ ಮೈನಾರಿಟಿ ಯೂತ್'ಪೂರಕವಾಗುತ್ತಿದ್ದು, ಈ ತರಬೇತಿ ಕೇಂದ್ರದಿಂದ ಕಲಿಕೆ ನಡೆಸಿ 2 ಸಾವಿರಕ್ಕೂ ಅಧಿಕ ಮಂದಿ ಹೊರ ಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಇವರಲ್ಲಿ 126 ಮಂದಿ ವಿವಿಧ ಕೇಂದ್ರ-ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ನೌಕರಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿರುವುದಾಗಿ ಜಿಲ್ಲಾ ಅಲ್ಪಸಮಖ್ಯಾತ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಬಿ.ಹಂಝಾ ತಿಳಿಸಿದ್ದಾರೆ.
ಸುಮಾರು 450 ಮಂದಿ ವಿವಿಧ ರ್ಯಾಂಕ್ ಲಿಸ್ಟ್ ಗಳಲ್ಲಿ ಸ್ಥಾನ ಪಡೆದಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಲಿಕಾ ಕೇಂದ್ರದಲ್ಲಿ ಪ್ರತಿ ಬ್ಯಾಚ್ ನಲ್ಲೂ ಶೇ 80 ಮಂದಿ ಅಲ್ಪಸಂಖ್ಯಾತ ಹಾಗೂ ಶೇ 20 ಒ.ಬಿ.ಸಿ. ವಿಭಾಗದ ಉದ್ಯೋಗಾರ್ಥಿಗಳು ತರಬೇತಿ ಪಡೆಯುತ್ತಾರೆ. 18 ವರ್ಷ ಪ್ರಾಯ ಪೂರ್ತಿಗೊಂಡಿರುವ , ಎಸ್ಸೆಸೆಲ್ಸಿ ಉತ್ತೀರ್ಣರಾದವವರಿಗೆ ಇಲ್ಲಿ ಪ್ರವೇಶಾತಿ ಇರುವುದು. 6 ತಿಂಗಳ ಕಾಲಾವಧಿ ಹೊಂದಿರುವ ತರಗತಿಗಳಿಗೆ 25 ಮಂದಿಯ ಪರಿಣತ ತಂಡ ನೇತೃತ್ವ ವಹಿಸುತ್ತಿದೆ. ಕೋವಿಡ್ ಅವಧಿಯಲ್ಲೂ ಆನ್ ಲೈನ್ ರೂಪದಲ್ಲಿ ತರಬೇತಿ ನೀಡಲಾಗಿದ್ದು, ಹೊಸ ಮೂರು ಬ್ಯಾಚ್ ಗಳ ತರಬೇತಿ ಜ.1ರಿಂದ ಆರಂಭಗೊಂಡಿದೆ. ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಮೈನಾರಿಟಿ ಕೋಚಿಂಗ್ ಸೆಂಟರ್ ಗಳು ಚಟುವಟಿಕೆ ನಡೆಸುತ್ತವೆ. 2013ರಲ್ಲಿ ಚೆರ್ಕಳದ ನೂತನ ಬಸ್ ನಿಲ್ದಾಣ ಟರ್ಮಿನಲ್ ನಲ್ಲಿ ಜಿಲ್ಲಾ ತರಬೇತಿ ಕೇಂದ್ರ ಆರಂಭಗೊಂಡಿದೆ.





