ತಿರುವನಂತಪುರ: ಕೇರಳದ ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಕ್ಕೆ ಆಗಮಿಸಿರುವ ಹೈಕಮಾಂಡ್ ಪ್ರತಿನಿಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ಕೆಪಿಸಿಸಿ ಕೇರಳ ಘಟಕದ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲು ಕೇಂದ್ರ ಯತ್ನಿಸುತ್ತಿದ್ದು, ಇದಕ್ಕಾಗಿ ಕೇಂದ್ರೀಯ ತನಿಖಾ ಏಜನ್ಸಿಗಳನ್ನು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಚಿನ್ನ ಕಳ್ಳಸಾಗಾಟ, ಡಾಲರ್ ಸಾಗಾಟ, ಲೈಫ್ ಮಿಶನ್ ಸಹಿತ ಕೇರಳ ಎಡರಂಗ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಕೇಂದ್ರೀಯ ಏಜನ್ಸಿಗಳು ತನಿಖೆ ನಡೆಸುತ್ತಿದ್ದು, ಇದನ್ನು ಚುನಾವಣಾ ವಿಷಯವಾಗಿ ಕಾಂಗ್ರೆಸ್ ಪ್ರಚಾರನಡೆಸುತ್ತಿದ್ದ ಮಧ್ಯೆ ಗೆಹ್ಲೋಟ್‍ನ ಈ ಹೇಳಿಕೆ ಕಾಂಗ್ರೆಸ್ ಮುಖಂಡರ ವಲಯದಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡರ ಇಬ್ಬಗೆ ನೀತಿಯನ್ನು ಬಿಜೆಪಿ ಟೀಕಿಸಿದೆ. ಪಶ್ಚಿಮ ಬಂಗಾಳ, ತಮಿಳ್ನಾಡಿನಲ್ಲಿ ಎಡರಂಗ -ಕಾಂಗ್ರೆಸ್ ಈಗಾಗಲೇ ಕೈಜೋಡಿಸಿದ್ದು, ಬಿಜೆಪಿಯನ್ನು ಎದುರಿಸಲು ಕೇರಳದಲ್ಲೂ ಇದನ್ನು ಮುಂದುವರಿಸುವ ಸೂಚನೆ ಗೆಹ್ಲೋಟ್ ಹೇಳಿಕೆಯಿಂದ ವ್ಯಕ್ತವಾಗಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತಿಳಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಎಡರಂಗ ಸರ್ಕಾರಕ್ಕೆ ಕೇಂದ್ರ ಕಾಂಗ್ರೆಸ್ ಮುಖಂಡರ ಈ ಹೇಳಿಕೆ ಸಮಾಧಾನ ತಂದುಕೊಟ್ಟಿದ್ದರೆ, ಕೇರಳದ ಕಾಂಗ್ರೆಸ್ ಮುಖಂಡರಲ್ಲಿ ಇರಸುಮುರಸಿಗೆ ಕಾರಣವಾಗಿದೆ. ಗೆಹ್ಲೋಟ್ ಹೇಳಿಕೆಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಡರಂಗವನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಮುಖಂಡರು ಚಿಂತಿತರಾಗಿದ್ದಾರೆ.


