ಲಂಡನ್: ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಹಳೆಯ ಕೋವಿಡ್ ವೈರಸ್ ಗಿಂತ ಮಾರಣಾಂತಿಕವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ನ ಹೊಸ ರೂಪಾಂತರವು ಮತ್ತಷ್ಟು ಮಾರಣಾಂತಿಕವಾಗಿದ್ದಂತೆ ತೋರುತ್ತಿರುವುದಾಗಿ ಆರಂಭಿಕ ಪುರಾವೆಗಳು ಸೂಚಿಸುತ್ತವೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಬೋರಿಸ್ ಜಾನ್ಸನ್, 'ಹೊಸ ವೈರಸ್ ಅಪಾಯಗಳ ಸಲಹಾ ಸಮೂಹದ (NERVTAG)ವಿಜ್ಞಾನಿಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಹೊಸ ರೂಪಾಂತರಿ ಕೊರೋನಾ ವೈರಸ್ ಮತ್ತಷ್ಟು ಮಾರಕವೆಂದು ತೋರುತ್ತದೆ. ಆದರೆ, ಎಲ್ಲ ವಿಧದ ಕೊರೊನಾ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಿರುವ ಫೈಜರ್/ಬಯೋಟೆಕ್ ಮತ್ತು ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಕಂಪನಿಗಳ ಎರಡೂ ಲಸಿಕೆಗಳನ್ನು ಬ್ರಿಟನ್ನಿನಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್ ನಲ್ಲಿ ಮೊದಲು ಕಂಡು ಬಂದ ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುವ ಜೊತೆಗೆ ಮಾರಣಾಂತಿಕ ಕೂಡ. ಸಾವಿನ ಪ್ರಮಾಣ ಅತಿ ಹೆಚ್ಚಾಗಿದೆ ಎಂಬುದಕ್ಕೆ ಕೆಲವು ಪುರಾವೆಗಳು ಈಗ ಕಂಡುಬಂದಿವೆ . ಹಾಗಾಗಿ, ರಾಷ್ಟ್ರೀಯ ಆರೋಗ್ಯ ಸೇವೆ ತೀವ್ರ ಒತ್ತಡದಲ್ಲಿದೆ. ಪ್ರಸ್ತುತ ನಾವು ನೀಡುತ್ತಿರುವ ಎರಡೂ ಲಸಿಕೆಗಳು ಹಳೆಯ ಮತ್ತು ಹೊಸ ಮಾದರಿಯ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿವೆ ಎಂಬುದನ್ನು ಪ್ರಸ್ತುತ ಪುರಾವೆಗಳು ಸಾಬೀತುಪಡಿಸಿವೆ. ಹಳೆಯ ರೂಪಾಂತರಕ್ಕೆ ಹೋಲಿಸಿದರೆ ಹೊಸ ರೂಪಾಂತರಿ ವೈರಸ್ ಸೋಂಕಿತ ಜನರಿಗೆ ಹೆಚ್ಚಿನ ಅಪಾಯವಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಜಾನ್ಸನ್ ಹೇಳಿದ್ದಾರೆ.
ರೂಪಾಂತರಿ ಕೊರೋನಾ ವೈರಸ್ ಮೊದಲು ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿ ಕಂಡು ಬಂದಿತ್ತು. ಬಳಿಕ ಲಂಡನ್ ಮೂಲಕ ಇತರ ಪ್ರದೇಶಗಳಿಗೂ ವೇಗವಾಗಿ ಹರಡಿತು. ಬಳಿಕ ನಡೆದ ಅಧ್ಯಯನದಲ್ಲಿ ರೂಪಾಂತರಿ ವೈರಸ್ ಹಳೆಯ ವೈರಸ್ ಗಿಂತ ಶೇ.70ರಷ್ಟು ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ ವೈರಸ್ ಪರಿಣಾಮಕಾರಿತ್ವ ಮತ್ತು ಮಾರಣಾಂತಿಕತೆ ಬಗ್ಗೆ ಮಾಹಿತಿ ಅಥವಾ ಪುರಾವೆಗಳು ಲಭ್ಯವಾಗಿರಲಿಲ್ಲ. ಇದೀಗ ಈ ರೂಪಾಂತರಿ ವೈರಸ್ ಹಳೆಯ ವೈರಸ್ ಗಿಂತ ಮಾರಣಾಂತಿಕ ಎಂಬುದು ಪುರಾವೆಗಳಿಂದ ತಿಳಿದುಬಂದಿದೆ.

