ಮಂಜೇಶ್ವರ : ಭಾರತದ ಅತೀ ದೊಡ್ಡ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕ್ಯಾಂಪ್ಕೋ ಮಂಗಳೂರು ಸಂಸ್ಥೆಯ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಯವರಿಗೆ ಫೆಬ್ರವರಿ 11ರಂದು ಹುಟ್ಟೂರ ಸನ್ಮಾನ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರಗಲಿದೆ.
ಜಯಪ್ರಕಾಶ ನಾರಾಯಣ ಅವರು ಪ್ರಗತಿಪರ ಕೃಷಿಕರಾಗಿ, ಧಾರ್ಮಿಕ ಸಾಮಾಜಿಕ ನೇತಾರರಾಗಿ, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಹಾಗೂ ವಾಣೀವಿಲಾಸ ಕಿರಿಯಪ್ರಾಥಮಿಕ ಶಾಲೆ ತೊಟ್ಟೆತ್ತೋಡಿ ಶಾಲೆಯ ಸಂಚಾಲಕರಾಗಿ, ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷರಾಗಿ ಚಿಗುರುಪಾದೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಕೊಡುಗೈ ದಾನಿಯಾಗಿ ಗುರುತಿಸಲ್ಪಟ್ಟವರು.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷರೂ ಧಾರ್ಮಿಕ ನೇತಾರರೂ ಆಗಿರುವ ಡಾ.ಶ್ರೀಧರ ಭಟ್ ಎಂ ವಹಿಸಲಿದ್ದು ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಟ್ರಸ್ಟ್ ದೈಗೋಳಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಉದಯಕುಮಾರ್ ಭಟ್ ನೂಜಿ ಸನ್ಮಾನ ಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಮಂಗಳೂರು ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಭಾಗವಹಿಸಲಿದ್ದಾರೆ. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರ ಮಿತ್ರರೂ, ಹಿತೈಷಿಗಳೂ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವಸಮಿತಿಯ ಪದಾಧಿಕಾರಿಗಳು ಸದಸ್ಯರನ್ನೊಳಗೊಂಡ ಸನ್ಮಾನ ಸಮಿತಿ ಕಾರ್ಯಕ್ರಮ ಆಯೋಜಿಸಿದ್ದಾರೆ.





