ಕುಂಬಳೆ: ತುಳುನಾಡಿನ ಪ್ರತಿಯೊಂದು ಆಚರಣೆಗಳ ಹಿಂದೆಯೂ ವೈಜ್ಞಾನಿಕ ಚಿಂತನೆಯೊಂದಿಗೆ ಸಾಮಾಜಿಕ ಸುಸ್ಥಿರತೆಯ ಸಂಕಲ್ಪ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಕೆಡ್ಡಸ ಆಚರಣೆ ಮಹತ್ವಪೂರ್ಣವಾಗಿ ಫಲವಂತಿಕೆಯ ಸಮೃದ್ದತೆಯ ಅಪೂರ್ವ ಸಂಕೇತವಾಗಿದೆ ಎಂದು ಜೈ ತುಳುನಾಡು ಕೇಂದ್ರ ಸಮಿತಿ ಅಧ್ಯಕ್ಷ ಸುದರ್ಶನ್ ಸುರತ್ಕಲ್ ತಿಳಿಸಿದರು.
ಅವರು ತುಳು ಭಾಷೆ ಹಾಗೂ ಹಿಂದಿನ ತಲೆಮಾರಿನ ಆಚಾರ - ವಿಚಾರಗಳನ್ನ ಇಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜೈ ತುಳುನಾಡು ಕಾಸರಗೋಡು ಸಂಘಟನೆಯ ನೇತೃತ್ವದಲ್ಲಿ ಕುಂಬಳೆ ಬಳಿಯ ಕಳತ್ತೂರು ನಲ್ಲಿರುವ "ಶ್ರೀ ಲಲಿತಾಂಬ" ನಿವಾಸದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ "ತುಳುನಾಡ ಕೆಡ್ಡಸ ಪರ್ಬೊ" ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಆಚರಣೆಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ತಲೆಮಾರಿಗೆ ತಲಸ್ಪರ್ಶಿ ಅರಿವು ಮೂಡಿಸುವ ಯತ್ನಗಳು ಸದಾ ನಡೆಯುತ್ತಿರಬೇಕು ಎಂದು ಅವರು ಈ ಸಂದರ್ಭ ಕರೆನೀಡಿದರು.
ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಂಪರೆ ಮತ್ತು ಆಧುನಿಕತೆಯ ಸಂಕ್ರಮಣ ಕಾಲಘಟ್ಟವಾದ ಇಂದು ಹೊಸ ತಲೆಮಾರಿಗೆ ಆಚರಣೆ, ನಂಬಿಕೆ-ನಡವಳಿಕೆಗಳ ಸ್ಪಷ್ಟ ಅರಿವು ಇಲ್ಲದಿರುವುದು ಖೇದಕರ. ಸಂಶೋಧನೆ, ಸತ್ಯ ಶೋಧನೆಗಳ ಮೂಲಕ ಆಚರಣೆಗಳನ್ನು ಪುನಃ ಸಂಘಟಿಸುವ ಮೂಲಕ ತೌಳವ ನೆಲದ ಶ್ರೀಮಂತಿಕೆಯನ್ನು ಪರಂಪರೆಗೆ ಧಕ್ಕೆಯಾಗದಂತೆ ನಿರ್ವಹಿಸುವ ಚಟುವಟಿಕೆಗಳು ಮುನ್ನಡೆಯುತ್ತಿರಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಂಚಿ ಕೊಳ್ನಾಡ್ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ತುಳು ಸಂಶೋಧಕಿ, ಕಾದಂಬರಿಗಾರ್ತಿ ರಾಜಶ್ರೀ ಟಿ. ರೈ ಪೆರ್ಲ, ಬಂಬ್ರಾಣ ಯಜಮಾನ ಬಂಬ್ರಾಣ ಮೋಹನ್ ದಾಸ್ ರೈ, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪಲತಾ ಪಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಜೈ ತುಳುನಾಡಿನ ತುಳು ವಿಕಿಪಿಡಿಯಾದ ಸಂಪಾದಕಿ ವಿನೋದ್ ಪ್ರಸಾದ ರೈ ಕಾರಿಂಜ ಅವರು ಕೆಡ್ಡಸದ ಬಗ್ಗೆ ಮಾಹಿತಿ ನೀಡಿದರು. ಕು. ವೃದ್ಧಿ ಆಳ್ವ ಕಳತ್ತೂರು ತುಳು ಭಕ್ತಿಗೀತೆ ಹಾಡಿದರು. ಜೈ ತುಳುನಾಡು ಕಾಸರಗೋಡು ಸಂಘಟನೆಯ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಯಜ್ಞೇಶ್ ಕಿಳಿಂಗಾರ್ ವಂದಿಸಿದರು. ಜೊತೆ ಕಾರ್ಯದರ್ಶಿ ಶ್ರೀನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು.







