ಕಾಸರಗೋಡು: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಗರಿಷ್ಟ ಮಟ್ಟದಲ್ಲಿ ನ್ಯಾಯ ಒದಗಿಸಲಾಗುವುದು ಎಂದು ಮಹಿಳಾ ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಆಯೋಗದ ಅದಾಲತ್ ನಲ್ಲಿ ಅವರು ಮಾತನಾಡಿದರು.
ಕನಕಪಳ್ಳಿಯಲ್ಲಿ ಮಹಿಳೆಯೊಬ್ಬರು ನಿಗೂಢವಾಗಿ ಮೃತಪಟ್ಟ ಪ್ರಕರಣದಲ್ಲಿ, ಮೃತರ ತಾಯಿ 2020 ಜನವರಿ ತಿಂಗಳಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ಮಧ್ಯಸ್ಥಿಕೆ ವಹಿಸಿದ ಆಯೋಗ ತನಿಖೆಯ ವರದಿಯನ್ನುಬಯಸಿದೆ. ನಂತರ ನಡೆಸಲಾದ ತನಿಖೆಯಲ್ಲಿ ಗೃಹಪೀಡನೆ ನಿಯಂತ್ರಣ ಕಾಯಿದೆ, ವರದಕ್ಷಿಣೆ ನಿಯಂತ್ರಣ ಕಾಯಿದೆ ಇತ್ಯಾದಿಗಳನ್ನು ಬಳಸಿದ ಪರಿಣಾಮ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿತ್ತು. ನಂತರ ಅದಾಲತ್ ಗೆ ಹಾಜರಾದ ಮೃತ ಮಹಿಳೆಯ ತಾಯಿ ತಮ್ಮ ಕೃತಜ್ಞತೆ ಸಲ್ಲಿಸಿದ್ದರು ಎಂದವರು ನುಡಿದರು.
ಗುರುವಾರ ನಡೆದ ಅದಾಲತ್ ನಲ್ಲಿ 34 ದೂರುಗಳ ಪರೀಶಿಲನೆ ನಡೆದಿದೆ. 17 ದೂರುಗಳಿಗೆ ತೀರ್ಪು ಒದಗಿಸಲಾಗಿದೆ. 15 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಸೀಲಿಸಲಾಗುವುದು. 2 ಪ್ರಕರಣಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಂದ ವರದಿ ಆಗ್ರಹಿಸಲಾಗಿದೆ.
ಅದಾಲತ್ ವೇಳೆ ಪಾನೆಲ್ ನ್ಯಾಯವಾದಿಗಳಾದ ಪಿ.ಸಿಂಧು, ರಮಾದೇವಿ ತಂಗಚ್ಚಿ, ಫ್ಯಾಮಿಲಿ ಕೌನ್ಸಿಲರ್ ಎಸ್.ರಮ್ಯಾ ಮೋಳ್, ಮಹಿಳಾ ಸೆಲ್ ಸಿ.ಪಿ.ಒ.ಗಳಾದ ಟಿ.ಆರ್.ರಮ್ಯತಾ, ಎ.ಜಯಶ್ರೀ ಉಪಸ್ಥಿತರಿದ್ದರು.




