ಕಾಸರಗೋಡು: ಭಾರತದ ಆಧ್ಯಾತ್ಮಿಕ ಮತ್ತು ಭೌತಿಕ ಚಿಂತನೆ ಭದ್ರವಾಗಿ ನೆಲೆನಿಂತಿರುವುದರಿಂದ ದೇಶ ವಿಶ್ವಮಾನ್ಯವಾಗಿರುವುದಾಗಿ ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ತಿಳಿಸಿದ್ದಾರೆ.
ಅವರು ಮಂಗಳವಾರ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ 12ನೇ ವಾರ್ಷಿಕ ದಿನಾಚರಣೆ ಉದ್ಘಾಟನೆ ಮತ್ತು ಕ್ಯಾಂಪಸ್‍ನಲ್ಲಿ ನಿರ್ಮಿಸಿರುವ ಅತಿಥಿಗೃಹ 'ನೀಲಗಿರಿ 'ಯನ್ನು ಲೋಕಾರ್ಪಣೆಗೈದು ಮಾತನಾಡಿದರು.
ಎಲ್ಲಾ ಚಿಂತನೆಗಳಿಗೂ ಭಾರತೀಯ ಸಂಸ್ಕøತಿ ಭದ್ರಬುನಾದಿ ಹಾಕಿಕೊಟ್ಟಿದೆ. ಜ್ಞಾನವೊಂದೇ ನಮ್ಮನ್ನು ಉನ್ನತಿಗೇರಿಸುವ ಸಾಧನ. ನಾಲ್ಕೂ ಕೋನಗಳಿಂದ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನರಾಗಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಉನ್ನತ ವಿದ್ಯಾಭ್ಯಾಸ ವಲಯದ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿಶ್ವ ವಿದ್ಯಾಲಯ ಮಹತ್ವದ ಜವಾಬ್ದಾರಿ ಹೊಂದಿರುವುದಾಗಿ ತಿಳಿಸಿದರು.
ಈ ಸಂಧರ್ಭ ಕ್ಯಾಂಪಸ್‍ನೊಳಗೆ ಸುಮಾರು 10.13ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ವಿಐಪಿ ಕೊಠಡಿ, 21ವಾತಾನುಕೂಲಿತ ಕೊಠಡಿ, ಕಚೇರಿ, 50ಮಂದಿಗೆ ಕುಳಿತುಕೊಳ್ಳಬಹುದಾದ ಸಭಾಂಗಣ ಒಳಗೊಂಡ ಎರಡಂತಸ್ತಿನ ಕಟ್ಟಡವನ್ನು ರಾಜ್ಯಪಾಲ ಆರಿಫ್‍ಮಹಮ್ಮದ್‍ಖಾನ್ ಲೋಕಾರ್ಪಣೆಗೈದರು.
ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ. ಎಚ್.ವೆಂಕಟೇಶ್ವರಲು ಸ್ವಾಗತಿಸಿದರು. ಅಕಾಡಮಿಕ್ ಡೀನ್ ಕೆ.ಪಿ ಸುರೇಶ್ ವರದಿ ಮಂಡಿಸಿದರು. ರಿಜಿಸ್ಟ್ರಾರ್ ಎಂ. ಮುರಳೀಧರನ್‍ನಂಬ್ಯಾರ್ ವಂದಿಸಿದರು.
ನಿರರ್ಗಳ ಭಾಷಣ:
ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಬರೆದು ತಂದ ಭಾಷಣ ಬಿಟ್ಟು ಭಾರತದ ಆಧ್ಯಾತ್ಮಿಕತೆ, ಭಗವದ್ಗೀತೆ, ಕುರಾನ್, ಭಾರತೀಯ ಸಂಸ್ಕøತಿಯ ಬಗ್ಗೆ ನಿರರ್ಗಳವಾಗಿ ಮಾತನಾಡುವ ಮೂಲಕ ಸಭಿಕರಿಗೆ ಭಾರತೀಯ ಸಂಸ್ಕøತಿಯ ಪರಿಚಯ ಮಾಡಿಕೊಟ್ಟರು. ಗುರು-ಶಿಷ್ಯ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.






