ಕಾಸರಗೋಡು: ಇಂಧನ ಬೆಲೆಯೇರಿಕೆ ವಿರೋಧಿಸಿ ಸಂಯುಕ್ತ ಮುಷ್ಕರ ಸಮಿತಿ ಮಂಗಳವಾರ ಕರೆ ನೀಡಿದ್ದ ಹನ್ನೆರಡು ತಾಸುಗಳ ಕೇರಳ ರಾಜ್ಯವ್ಯಾಪಿ ಹರತಾಳ ಯಶಸ್ವಿಯಾಗಿದೆ. ಬೆಳಗ್ಗೆ 6ರಿಂದ ಸಾಯಂಕಾಲ 6ರ ವರೆಗೆ ನಡೆದ ಮೋಟಾರುವಾಹನ ಮುಷ್ಕರದಲ್ಲಿ ಕೆಎಸ್ಸಾರ್ಟಿಸಿ, ಖಾಸಗಿ ಬಸ್‍ಗಳು ಸೇರಿದಂತೆ ಟ್ಯಾಕ್ಸಿ, ಲಾರಿ ಸಂಚಾರವೂ ಬಹುತೇಕ ಸ್ಥಗಿತಗೊಂಡಿತ್ತು. ಸಿಐಟಿಯು, ಎಐಟಿಯುಸಿ, ಎಸ್‍ಟಿಯು, ಐಎನ್‍ಟಿಯುಸಿ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳು ಹರತಾಳದಲ್ಲಿ ಪಾಲ್ಗೊಂಡಿತ್ತು. ಬಿಎಂಎಸ್ ಕಾರ್ಮಿಕ ಸಂಘಟನೆ ಮುಷ್ಕರದಿಂದ ದೂರ ಉಳಿದಿತ್ತು.
ಹರತಾಳದ ಮಧ್ಯೆ ಕಾಸರಗೋಡು ನಗರದಲ್ಲಿ ಸಂಚಾರ ನಡೆಸಿದ ಲಾರಿ, ಟ್ಯಾಕ್ಸಿ ವಾಹನಗಳನ್ನು ಹರತಾಳ ಬೆಂಬಲಿಗರು ತಡೆದು ವಾಪಾಸು ಕಳುಹಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸದಸ್ಯರು ತಮ್ಮ ವ್ಯಾಪಾರಿ ಸಂಸ್ಥೆಗಳನ್ನು ತೆರೆದು ಕಾರ್ಯಾಚರಿಸಿದ್ದರು. ಸಂಯುಕ್ತ ಮುಷ್ಕರ ಸಮಿತಿ ಪದಾಧಿಕಾರಿಗಳು ಮಂಗಳವಾರ ಬೆಳಗ್ಗೆ ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇರಳ ವಿಶ್ವ ವಿದ್ಯಾಲಯ ಮಂಗಳವಾರ ನಡೆಸಲುದ್ದೇಶಿಸಿದ್ದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಿತ್ತು. ಜತೆಗೆ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ ಶಾಲೆ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳ ಮಾದರಿ ಪರೀಕ್ಷೆಗಳನ್ನೂ ಮುಂದೂಡಲಾಗಿತ್ತು. ಸಿಐಟಿಯು, ಎಐಟಿಯುಸಿ, ಎಸ್‍ಟಿಯು, ಐಎನ್‍ಟಿಯುಸಿ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳು ಹರತಾಳದಲ್ಲಿ ಪಾಲ್ಗೊಂಡಿತ್ತು.






