ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸತತ 15 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರು ಮಾರ್ಚ್ 26 ರಂದು ನೆರೆಯ ಬಾಂಗ್ಲಾದೇಶ ಭೇಟಿ ಮಾಡುತ್ತಿದ್ದಾರೆ.
2019 ನವೆಂಬರ್ನಲ್ಲಿ ಅಮೆರಿಕಕ್ಕೆ ಹೋಗಿ ಬಂದ ನಂತರ ಮೋದಿ ಅವರು ಇದುವರೆಗೆ ಯಾವುದೇ ವಿದೇಶಕ್ಕೆ ಭೇಟಿ ನೀಡಿರಲಿಲ್ಲ. ಇದಕ್ಕೆ ಕಾರಣ ಕೊರೊನಾವೈರಸ್ ಸೋಂಕು. ಮುಂಜಾಗ್ರತಾ ಕ್ರಮವಾಗಿ ವಿದೇಶ ಪ್ರವಾಸಗಳನ್ನು ರದ್ದು ಮಾಡಿದ್ದರು.
ಇದೀಗ ಮತ್ತೆ ತಮ್ಮ ವಿದೇಶ ಪ್ರವಾಸಗಳಿಗೆ ಚಾಲನೆ ನೀಡಿರುವ ಅವರು ಬಾಂಗ್ಲಾದೇಶದಲ್ಲಿ ಮಾರ್ಚ್ 26 ರಂದು ನಡೆಯುವ ಬಾಂಗ್ಲಾದೇಶ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಮೋದಿ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸಿನಾ ಅವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ.
ಮೋದಿ ಅವರು ವಿದೇಶ ಪ್ರವಾಸವನ್ನು ತಮ್ಮ ಆಡಳಿತದ ಒಂದು ಮಹತ್ವದ ಭಾಗವಾಗಿ ಮಾಡಿಕೊಂಡಿದ್ದರು. ಇದರಿಂದ ವಿದೇಶಗಳ ಜೊತೆ ಭಾರತದ ಬಾಂಧವ್ಯ ಗಟ್ಟಿಗೊಂಡಿದ್ದಲ್ಲದೇ ಭಾರತದ ಬಗ್ಗೆ ವಿಶ್ವಮಟ್ಟದಲ್ಲಿ ಮುನ್ನಡೆ ಸಿಗುವಂತೆ ಮಾಡಿದ್ದರು. ಹೀಗಾಗಿ ಅವರು ಆಗಿಂದಾಗ ವಿದೇಶ ಪ್ರವಾಸಗಳನ್ನು ಕೈಗೊಂಡು ಗಮನ ಸೆಳೆದಿದ್ದರು. ಇದು ವಿರೋಧ ಪಕ್ಷಗಳ ವಿರೋಧಕ್ಕೂ ಪ್ರಮುಖ ಕಾರಣವಾಗಿತ್ತು.



