ನವದೆಹಲಿ : ನೆರೆರಾಷ್ಟ್ರಗಳೊಂದಿಗೆ ಸಹಭಾಗಿತ್ವದ ಭಾಗವಾಗಿ ಭಾರತೀಯ ಸೇನೆಯು ಭಾರತ ಅಭಿವೃದ್ಧಿಪಡಿಸಿದ ಒಂದು ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ನೇಪಾಳ ಸೈನ್ಯಕ್ಕೆ ಸೋಮವಾರ ಉಡುಗೊರೆಯಾಗಿ ನೀಡಿದೆ.
ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನಾಧಿಕಾರಿಗಳು ನೇಪಾಳ ಸೇನೆಗೆ ಲಸಿಕೆಗಳನ್ನು ಹಸ್ತಾಂತರಿಸಿದ್ದಾಗಿ ಕಠ್ಮಂಡುವಿನ ಭಾರತೀಯ ರಾಯಭಾರಿ ಟ್ವೀಟ್ ಮಾಡಿದ್ದಾರೆ.
ಈ ಮುನ್ನವೂ ಭಾರತ ಒಂದು ಮಿಲಿಯನ್ ಮೇಡ್ ಇನ್ ಇಂಡಿಯಾ ಡೋಸ್ ಕೊರೊನಾ ಲಸಿಕೆಗಳನ್ನು ತುರ್ತು ಬಳಕೆಗೆಂದು ನೇಪಾಳಕ್ಕೆ ನೀಡಿತ್ತು. ಇದೀಗ ಸೇನೆಗೆ ಮತ್ತೆ ಒಂದು ಲಕ್ಷ ಡೋಸ್ ಲಸಿಕೆ ನೀಡಿದ್ದು, ಇದರಿಂದ ಭಾರತ- ನೇಪಾಳ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳ್ಳುವ ನಿರೀಕ್ಷೆ ವ್ಯಕ್ತಗೊಂಡಿದೆ. ಭಾರತದ ಸೇನೆ ನೇಪಾಳದ ಸೇನೆಗೆ ಉಡುಗೊರೆಯಾಗಿ ಲಸಿಕೆ ನೀಡಿರುವ ಕುರಿತು ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‌ನಲ್ಲಿ ಫೋಟೊ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದೆ.
ನೇಪಾಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದೆ. ಚೀನಾ ಕೂಡ ನೇಪಾಳಕ್ಕೆ ಎಂಟು ಲಕ್ಷ ಡೋಸ್ ಲಸಿಕೆಗಳನ್ನು ನೀಡಿದೆ. ಪ್ರಸ್ತುತ ನೇಪಾಳದಲ್ಲಿ 276,839 ಕೊರೊನಾ ಪ್ರಕರಣಗಳಿದ್ದು, ಇದುವರೆಗೂ ಸೋಂಕಿನಿಂದ 3,027 ಮಂದಿ ಸಾವನ್ನಪ್ಪಿದ್ದಾರೆ.





