ಲಖನೌ: ಉತ್ತರ ಪ್ರದೇಶದ ಷಹಜಾನ್ ಪುರದಲ್ಲಿ 27 ವರ್ಷಗಳ ಹಿಂದೆ ಅತ್ಯಾಚಾರವೆಸಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಮಹಿಳೆಯೊಬ್ಬರು ಎಫ್ ಐಆರ್ ದಾಖಲಿಸಿದ್ದಾರೆ. ತನ್ನ ತಂದೆ ಯಾರು ಎಂದು ಆಕೆಯ ಮಗ ಆಗಾಗ್ಗೆ ಕೇಳುತ್ತಿದ್ದರಿಂದ 40 ವರ್ಷದ ಸಂತ್ರಸ್ತೆ ಈ ಕ್ರಮ ಕೈಗೊಂಡಿದ್ದಾರೆ.
ಎಫ್ ಐಆರ್ ಪ್ರಕಾರ, 1994ರಲ್ಲಿ ಸಂತ್ರಸ್ತೆ 13 ವರ್ಷದ ಬಾಲಕಿಯಿರುವಾಗ ಈ ಘಟನೆ ನಡೆದಿದೆ. ಷಹಜಾನ್ ಪುರದ ಸಂಬಂಧಿಕರ ಮನೆಯೊಂದರಲ್ಲಿ ವಾಸವಿರುವಾಗ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು.
ದೂರುದಾರ ಸಂತ್ರಸ್ತೆಯ ಮನೆಯ ಹತ್ತಿರ ವಾಸವಿದ್ದ ನಾಕಿ ಹಸನ್ ಎಂಬಾತ ಆಕೆಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಂದು ಅತ್ಯಾಚಾರಸವೆಸೆಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಎಂದು ಎಸ್ ಪಿ ಸಂಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿ ಹಸನ್ ಹಿರಿಯ ಸಹೋದರ, ಗುಡ್ಡು ಕೂಡಾ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ದೂರುದಾರ ಮಹಿಳೆ ತಿಳಿಸಿರುವುದಾಗಿ ಎಸ್ ಪಿ ಹೇಳಿದ್ದಾರೆ.
ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದ ನಂತರ ಆಕೆಯ ಆರೋಗ್ಯ ಪರಿಸ್ಥಿತಿ ಗಮನಿಸಿದ ಕುಟುಂಬ ಸದಸ್ಯರು ಯಾವುದೇ ಕೇಸ್ ದಾಖಲಿಸದೆ ಮತ್ತೊಂದು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಮಗುವನ್ನು ದತ್ತು ನೀಡಲಾಗಿತ್ತು.
ಕೆಲದಿನಗಳ ನಂತರ ತಾಯಿ ಮತ್ತು ಮಗ ಜೊತೆಯಾಗಿದ್ದು, ಆ ಸಂದರ್ಭದಲ್ಲಿ ತನ್ನ ತಂದೆ ಯಾರು ಎಂದು ಮಗ, ಸಂತ್ರಸ್ತೆಯನ್ನು ಕೇಳಿದ್ದಾನೆ. ಮಗನ ಒತ್ತಾಯದ ಮೇರೆಗೆ ಸಂತ್ರಸ್ತೆ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ದೂರು ದಾಖಲಿಸುವಂತೆ ಆಕೆಯ ಮಗನೇ ಪ್ರೋತ್ಸಾಹಿಸಿರುವುದಾಗಿ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ನಾಕಿ ಹಸನ್ ಮತ್ತು ಆತನ ಹಿರಿಯ ಸಹೋದರನ್ನು ಬಂಧಿಸಿ, ಡಿಎನ್ ಎ ಪರೀಕ್ಷೆ ಮಾಡಿಸಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾಳೆ.


