ನವದೆಹಲಿ: ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂದು ಬಿ.ಎಸ್.ಶ್ರೀನಿವಾಸ್ ನೇತೃತ್ವದ ಇಂಡಿಯನ್ ಯೂತ್ ಕಾಂಗ್ರೆಸ್(ಐವೈಸಿ) ಆಗ್ರಹಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಸೋಮವಾರ, ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ವ್ಯವಹಾರಗಳ ಚುಕ್ಕಾಣಿ ಹಿಡಿಯುವಂತೆ ಒತ್ತಾಯಿಸಿ ಐವೈಸಿ ನಿರ್ಣಯ ಅಂಗೀಕರಿಸಿದೆ.
'ಇದು ಕೇವಲ ನಿರ್ಣಯವಲ್ಲ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಧ್ವನಿಯಾಗಿದೆ' ಎಂದು ಯೂತ್ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಕ್ಕೂ ಮೊದಲು ಜನವರಿ 21 ರಂದು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಅಂಗೀಕರಿಸಿತ್ತು.
ಪಕ್ಷದ ಸಾಂಸ್ಥಿಕ ಚುನಾವಣೆಗೆ ಮುಂಚಿತವಾಗಿ ಇಂತಹ ನಿರ್ಣಯಗಳನ್ನು ಹೊರಡಿಸುವುದು ಇದೇ ಮೊದಲಲ್ಲ. ಕಾಂಗ್ರೆಸ್ ಪಕ್ಷ ಕಳೆದ ಮೂರು ವರ್ಷಗಳಲ್ಲಿ ಎರಡು ಚುನಾವಣೆಗಳನ್ನು ಕಂಡಿದ್ದು, ಪ್ರತಿ ಚುನಾವಣೆಯ ಮುಂಚೆ ವಿವಿಧ ರಾಜ್ಯ ಘಟಕಗಳು ಗಾಂಧಿಯವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೋರಿ ನಿರ್ಣಯಗಳನ್ನು ಮಂಡಿಸಿವೆ.
ಕಾಂಗ್ರೆಸ್ ಪಕ್ಷದ ಮುಂದಿನ ಪದಾಧಿಕಾರಿಗಳ ಚುನಾವಣೆಯು ಇನ್ನೆರಡು ತಿಂಗಳಲ್ಲಿ ನಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆ ಮುಗಿದ ನಂತರ ಜೂನ್ನಲ್ಲಿ ಕಾಂಗ್ರೆಸ್ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


