ನವದೆಹಲಿ: ದೇಶದಲ್ಲಿ ಈವರೆಗೂ ಒಟ್ಟಾರೇ 2.43 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದ್ದು, ಸುಮಾರು ಶೇ.71 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ, ಉಳಿದ ಶೇ. 29 ರಷ್ಟು ಡೋಸ್ ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಅಲ್ಲದೇ, ದೇಶದಲ್ಲಿ ಬಹುತೇಕ ಮಂದಿ ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ಕೇವಲ 19 ಲಕ್ಷ ಜನರು ಮಾತ್ರ ಕೋವಾಕ್ಸಿನ್ ಲಸಿಕೆ ಪಡೆದಿದ್ದಾರೆ.
ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.71.23 ಡೋಸ್ ಕೋವಿಡ್-19 ಲಸಿಕೆಯನ್ನು ಫಲಾನುಭವಿಗಳು ಪಡೆದಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಶೇ. 28.77 ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಉಪ- ವಿಭಾಗೀಯ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜ್ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಆದಾಗ್ಯೂ, ಮಾರ್ಚ್ 1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಕೋವಿಡ್-19 ಲಸಿಕೆ ರಾಷ್ಟ್ರೀಯ ತಜ್ಞರ ಗುಂಪಿನ ಶಿಫಾರಸ್ಸಿನ ಆಧಾರದ ಮೇಲೆ ಯಾವುದೇ ಕೇಂದ್ರ ಅಥವಾ ರಾಜ್ಯ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೊಳಪಡದಿದ್ದರೂ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತಹ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಅನುಮತಿ ನೀಡಲಾಗಿದೆ ಎಂದು ಭೂಷಣ್ ತಿಳಿಸಿದರು.






