ಕುಂಬಳೆ: ನಿವೃತ್ತ ಶಿಕ್ಷಕ ಭಾಸ್ಕರ ಅಡ್ವಳ ಸಂಪಾದಿಸಿದ "ಕಾಸರಗೋಡು ಒಕ್ಕಲಿಗರು" ಆಕರ ಗ್ರಂಥ ಕೃತಿಯ ಲೋಕಾರ್ಪಣೆ ಇತ್ತೀಚೆಗೆ ಕಾಸರಗೋಡು ತಾಯಿ ತೊಟ್ಟಿಲು ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕ ಜನಾರ್ದನ ತಾಯತೊಟ್ಟಿಲು ಅವರು ಶ್ರೀ ಸನ್ನಿಧಿಯಲ್ಲಿ ಪ್ರಾರ್ಥನೆಗೈದು ಲೋಕಾರ್ಪಣೆಗೊಳಿಸಿದರು. ಹುಜೂರು ತರವಾಡಿನ ಅಧ್ಯಕ್ಷ ಕೆ.ಮಂಜುನಾಥ, ಮಠದಮನೆ ತರವಾಡಿನ ರಕ್ಷಾಧಿಕಾರಿ ರವೀಂದ್ರ, ಬಟ್ಟತ್ತೂರು ತರವಾಡಿನ ವಸಂತ ಸುಳ್ಯಪದವು, ಪಳ್ಳಿಪುರ ತರವಾಡಿನ ಸಾಂತಯ್ಯ ಟಿ., ದೊಡ್ಡಮನೆ ತರವಾಡಿನ ಹರೀಂದ್ರ ಆಳಿಂಜೆ, ಕೋಟೆಮನೆ ತರವಾಡಿನ ವಿಷ್ಣು ಮೈಲಾಟಿ, ಅಡ್ವಳ ತರವಾಡಿನ ಭಾಸ್ಕರ ಎ. ಉಪಸ್ಥಿತರಿದ್ದರು.
ಜಿಲ್ಲೆಯ ಒಕ್ಕಲಿಗರ ತರವಾಡುಗಳು, ಆರಾಧನಾಲಯಗಳು, ಐತಿಹ್ಯಗಳು, ಸಂಘಟನೆಗಳ ಸಾಧನಾ ಮಾಹಿತಿಗಳು ಹಾಗೂ ಜೀವನ ಮೌಲ್ಯಗಳಿರುವ ಅಪೂರ್ವ ಕೃತಿಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಮುನ್ನುಡಿ ಬರೆದಿದ್ದಾರೆ. ಕಿರಿಯರಿಗೆ ಅಧ್ಯಯನ ದೃಷ್ಟಿಯಿಂದ ಆಸ್ತಿಯಾಗಲಿರುವ ಈ ಕೃತಿ ಓದುಗರ ವ್ಯಕ್ತಿತ್ವ ಸುಧಾರಣೆ ಮತ್ತು ಪ್ರಗತಿಗೆ ಸಹಾಯಕವಾಗಲಿದೆ.


