ಕುಂಬಳೆ: ಮಂಗಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬಣೂರಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯ ವಿರುದ್ಧ ಕ್ರಿಯಾ ಸಮಿತಿಯ ಹೆಸರಿನಲ್ಲಿ ಕೆಲವರು ಕೈಗೊಂಡ ಕ್ರಮ ಅಪ್ರಬುದ್ದವಾದುದು ಎಂದು ಗ್ರಾ.ಪಂ. ಆಡಳಿತ ಸಮಿತಿ ಮತ್ತು ಅಧಿಕಾರಿಗಳು ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಲ್ಪಾಡಿ ಗ್ರಾಮ ಪಂಚಾಯತಿ ರಾಷ್ಟ್ರೀಯ ಹೆದ್ದಾರಿ ಸಾಗುವ ಪ್ರಮುಖ ಕೇಂದ್ರವಾಗಿದ್ದು, ಜಿಲ್ಲೆಯಲ್ಲೇ ಅತೀ ದೊಡ್ಡ ನಗರ ಪ್ರದೇಶದಲ್ಲಿ ಪ್ರಮುಖವಾದುದಾಗಿದೆ. ಸಾವಿರಾರು ವ್ಯಾಪಾರಿ ಕೇಂದ್ರಗಳು ಮತ್ತು ಫ್ಲ್ಯಾಟ್‍ಗಳನ್ನು ಹೊಂದಿರುವ ಪಂಚಾಯತಿ ನಗರ ಪ್ರದೇಶವು ಮಿತಿಗಿಂತ ಅತ್ಯಧಿಕ ಪ್ರಮಾಣದ ದೈನಂದಿನ ತ್ಯಾಜ್ಯ ಉತ್ಪಾದಿಸುತ್ತಿದೆ. ಈ ಎಲ್ಲಾ ತ್ಯಾಜ್ಯವನ್ನು ಪ್ರತಿನಿತ್ಯ ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯದ ಪ್ರಮಾಣವು ಮಿತಿಗಿಂತ ಹೆಚ್ಚಳಗೊಂಡಿರುವುದರಿಂದ ನಿರ್ವಹಣೆಯಲ್ಲಿ ಕೆಲವೊಂದು ಸಮಸ್ಯೆಗಳು ತಲೆದೋರಿದೆ. ಆದರೂ ಸಮರೋಪಾದಿಯಲ್ಲಿ ಗರಿಷ್ಠ ಮಟ್ಟದ ತ್ಯಾಜ್ಯ ಸಂಸ್ಕರಣ ನಡೆಸಲಾಗುತ್ತಿದೆ. ತ್ಯಾಜ್ಯದ ಹೆಸರಿನಲ್ಲಿ ದೀರ್ಘಕಾಲದಿಂದ ಪಂಚಾಯತಿಯ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿರುವವರು ಜನರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಆಂದೋಲನಕ್ಕೆ ತಯಾರಿ ನಡೆಸುತ್ತಿದ್ದಾರೆ. ಪ್ರಸ್ತುತ ಆಡಳಿತ ಮಂಡಳಿ ಒಂದೂವರೆ ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿದ್ದು, ಸ್ಥಳೀಯ ವಾರ್ಡ್ ಸದಸ್ಯ ಹರಿತ ಕರ್ಮಸೇನೆ, ನೈರ್ಮಲ್ಯ ಮಿಷನ್ ಸಹಯೋಗದೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮೊದಲ ಆದ್ಯತೆ ನೀಡಿ ತುರ್ತು ನಿರ್ವಹಣೆಗೆ ಕ್ರಮ ಕೈಗೊಂಡಿದ್ದಾರೆ. ಹಸಿರು ಕರ್ಮಸೇನೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತ್ಯಾಜ್ಯ ನಿರ್ವಹಣೆಯನ್ನು ಆಂದೋಲನದ ರೀತಿಯಲ್ಲಿ ನಿರ್ವಹಿಸಲು ಮುಂದಾಗುತ್ತಿದೆ. ಪ್ರಸ್ತುತ ವಿಧಾನ ಸಭಾ ಚುನಾವಣೆಯ ನಿಬಂಧನೆಗಳು ಜಾರಿಗೊಂಡಿರುವುದರಿಂದ ಆಡಳಿತಾತ್ಮಕ ತೊಡಕುಗಳಿದ್ದು, ಚುನಾವಣೆ ಮುಗಿದ ತಕ್ಷಣ ತ್ಯಾಜ್ಯ ನಿರ್ವಹಣೆಯ ಬೃಹತ್ ಮಟ್ಟದ ಚಟುವಟಿಕೆಗಳು ಆರಂಭಗೊಳ್ಳುವುದು. ತ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಕೆಲವರು ಮಾಡಿದ ಪ್ರಯತ್ನಗಳು ನ್ಯಾಯಯುತ ಅಲ್ಲ ಎಂದು ಹೇಳಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಿಷಾನಾ ಸಬೀರ್, ಉಪಾಧ್ಯಕ್ಷ ಯೂಸುಫ್ ಹೇರೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಬೂನ್, ಖೈರುನ್ನಿಸಾ ಉಮ್ಮರ್, ಇರ್ಫಾನಾ ಇಕ್ಬಾಲ್, ಗ್ರಾ.ಪಂ.ಕಾರ್ಯದರ್ಶಿ ಸಂತೋಷ್ ವರ್ಗೀಸ್, ಸಹಾಯಕ ಕಾರ್ಯದರ್ಶಿ ದೀಪೇಶ್, ನೈರ್ಮಲ್ಯ ಮಿಷನ್ ಜಿಲ್ಲಾ ಸಂಯೋಜಕಿ ಲಕ್ಷ್ಮಿ , ಸಹಾಯಕ ಸಂಯೋಜಕ ಪ್ರೇಂ ರಾಜ್, ವಲಯ ಸಂಯೋಜಕ ರಾಘವನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.




