ತಿರುವನಂತಪುರ: ಕಿಫ್ಬಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆ ನಡೆದಿದೆ ಎಂದು ತಿಳಿದುಬಂದಿದೆ. ಕಿಫ್ಬಿಯಿಂದ ಕಳೆದ ಐದು ವರ್ಷಗಳಲ್ಲಿ ಯೋಜನೆಗಳ ವಿವರಗಳನ್ನು ಅಧಿಕಾರಿಗಳು ಈ ಹಿಂದೆ ಸಂಗ್ರಹಿಸಿದರು. ಈ ಅವಧಿಯಲ್ಲಿ ಪ್ರತಿ ಯೋಜನೆಯ ಪಾವತಿಗಳ ವಿವರಗಳು ಮತ್ತು ತೆರಿಗೆ ವಿವರಗಳನ್ನು ನೀಡುವಂತೆ ಗುತ್ತಿಗೆದಾರರಿಗೆ ನಿರ್ದೇಶಿಸಲಾಗಿತ್ತು.
ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ ಯಾವುದೇ ಅಸ್ವಾಭಾವೀಕತೆ ಇಲ್ಲವೆಂದೂ ಅವರು ಕೇಳಿದ ಎಲ್ಲಾ ದಾಖಲೆ ಕಡತಗಳನ್ನು ನೀಡಲಾಗುವುದೆಂದೂ ಕಿಪ್ಬಿಯ ಆಡಳಿತಾತ್ಮಕ ವ್ಯವಸ್ಥಾಪಕರು ಹೇಳಿರುವರು. ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ಬೆನ್ನಿಗೇ ಆದಾಯ ತೆರಿಗೆ ಇಲಾಖೆಯು ಕಿಫ್ಬಿ ವಹಿವಾಟುಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ.
ಇದೇ ವೇಳೆ ಹಣಕಾಸು ಸಚಿವ ಥಾಮಸ್ ಐಸಾಕ್ ಆದಾಯ ತೆರಿಗೆ ಇಲಾಖೆಯನ್ನು "ಸಂಪೂರ್ಣವಾಗಿ ಕಪಟ" ಎಂದು ಆರೋಪಿಸಿದರು. ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಕಿಫ್ಬಿಯ ಖ್ಯಾತಿಗೆ ಮಸಿ ಬಳಿಯುವುದು ಈ ತನಿಖೆಯ ಹಿಂದಿನ ಲಕ್ಷ್ಯ ಎಂದವರು ಟೀಕಿಸಿರುವರು. ಮಾಧ್ಯಮಗಳಿಗೆ ಮುಂಚಿತವಾಗಿ ತಿಳಿಸಿ ನಡೆಸಲಾಗುವ ಇಂತಹ ತನಿಖಾ ನಾಟಕಗಳನ್ನು ನಿಲ್ಲಿಸಬೇಕು ಎಂದು ಹಣಕಾಸು ಸಚಿವರು ಹೇಳಿದರು.



