ತಿರುವನಂತಪುರಂ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ತಮ್ಮ ಸುದೀರ್ಘ ಮೌನ ಮುರಿದಿದ್ದಾರೆ. ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಕೇರಳದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ಕ್ರಮಗಳನ್ನು ಟೀಕಿಸಿದ್ದಾರೆ. 'ದೇಶದಲ್ಲಿ ನಿರುದ್ಯೋಗವು ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ. ಇದು 2016 ರಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ವಿವೇಚಿಸದೆ ತೆಗೆದುಕೊಂಡ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಉಂಟಾಗಿರುವ ಬಿಕ್ಕಟ್ಟು' ಎಂದು ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಸಿದ್ಧಾಂತಕ್ಕೆ ಹತ್ತಿರವಾದ ಆರ್ಥಿಕ ಚಿಂತಕರ ಕೂಟವಾದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿರುವ ವರ್ಚುವಲ್ ಸಮ್ಮೇಳನ - 'ಪ್ರತೀಕ್ಷ 2030″ಅನ್ನು ಇಂದು ಉದ್ಘಾಟಿಸಿ ಸಿಂಗ್ ಮಾತನಾಡುತ್ತಿದ್ದರು.'ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್, ಸಾಲದ ಸಮಸ್ಯೆಗೆ ತೇಪೆ ಹಾಕಲು ತೆಗೆದುಕೊಳ್ಳುತ್ತಿರುವ ತಾತ್ಕಾಲಿಕ ಕ್ರಮಗಳು, ಮುಂಬರಲಿರುವ ಸಾಲದ ಬಿಕ್ಕಟ್ಟಿನ ಬಗ್ಗೆ ನಮ್ಮನ್ನು ಕುರುಡಾಗಿಸಲು ಸಾಧ್ಯವಿಲ್ಲ. ಈ ಸಮಸ್ಯೆಯಿಂದಾಗಿ ಸಣ್ಣ ಮತ್ತು ಮಧ್ಯಮ ವಲಯಕ್ಕೆ ಭಾರೀ ಪೆಟ್ಟು ಬೀಳಲಿದೆ ಎಂದು ಸಿಂಗ್ ಹೇಳಿದ್ದಾರೆ.
ಮೋದಿ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್, 'ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಭಾರತೀಯ ರಾಜಕೀಯ ಮತ್ತು ಅರ್ಥಶಾಸ್ತ್ರದ ಮೂಲಾಧಾರವಾಗಿರುವ ಒಕ್ಕೂಟದ ಸಿದ್ಧಾಂತ ಮತ್ತು ರಾಜ್ಯಗಳೊಂದಿಗೆ ನಿಯಮಿತ ಸಮಾಲೋಚನೆ ನಡೆಸುವ ಪರಿಪಾಠ, ಈಗಿನ ಕೇಂದ್ರ ಸರ್ಕಾರದಲ್ಲಿ ಕಂಡುಬರುವುದಿಲ್ಲ' ಎಂದಿದ್ದಾರೆ.
ಕೇರಳದಲ್ಲಿ ಮತ್ತು ಇನ್ನೂ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಹಣಕಾಸು ವ್ಯವಸ್ಥೆ ಹಾಳಾಗಿದೆ. ರಾಜ್ಯ ಸರ್ಕಾರಗಳು ಹೆಚ್ಚುಹೆಚ್ಚು ಸಾಲ ಪಡೆಯುತ್ತಾ ಇವೆ, ಇದರಿಂದ ಮುಂದಿನ ಬಜೆಟ್ಗಳ ಮೇಲೆ ಅಸಹನೀಯ ಹೊರೆ ಬೀಳುತ್ತದೆ ಎಂದ ಸಿಂಗ್, ಕರೊನಾ ಸಂದರ್ಭದಲ್ಲಿ ಐಟಿ ಕ್ಷೇತ್ರ ಹೇಗೋ ನಡೆಯುತ್ತಿದೆ. ಆದರೆ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ ಎಂದಿದ್ದಾರೆ.
'ಈ ಎಲ್ಲ ಕಷ್ಟಗಳ ನಡುವೆ ಯುಡಿಎಫ್, ಯೋಜಿತ ಅಭಿವೃದ್ಧಿಯತ್ತ ದೃಷ್ಟಿ ನೆಟ್ಟು ಸಾಮಾನ್ಯ ಜನರ ಒಳಿತಿಗೆ ದುಡಿಯುತ್ತಿದೆ. ಇದು ಕೇರಳಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ ಆಶಾಕಿರಣ' ಎಂದ ಸಿಂಗ್, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಭಾಗವಾಗಿರುವ ಯುಡಿಎಫ್, ಕೇರಳದಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂದು ಹೇಳಿದ್ದಾರೆ.






