ತಿರುವನಂತಪುರ: ಸಾಮಾನ್ಯ ಪರೀಕ್ಷೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಿಬಿಎಸ್‍ಇ ಮಂಡಳಿಗೆ ನಿರ್ದೇಶನ ನೀಡಿದೆ. ಹಲವಾರು ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕರೆದು ಸಿಬಿಎಸ್‍ಇ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಪರೀಕ್ಷೆಗಳನ್ನು ನಡೆಸಿವೆ ಎಂದು ಪೋಷಕರು ದೂರಿದ ಹಿನ್ನೆಲೆಯಲ್ಲಿ ಆಯೋಗ ಮಧ್ಯಪ್ರವೇಶಿಸಿ ಈ ಆದೇಶ ನೀಡಿದೆ. ಕೊರೋನಾ ಪ್ರಸರಣದ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಿಬರ್ಂಧಿಸಲಾಗಿದೆ.
ಎರ್ನಾಕುಳಂ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಒಂಭತ್ತು ಮತ್ತು ಹನ್ನೊಂದನೇ ತರಗತಿಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕರೆಯಲಾಗಿದೆ ಎಂದು ಪೋಷಕರು ದೂರಿದ್ದಾರೆ. ದೂರನ್ನು ಆಧರಿಸಿ ಆದೇಶ ನೀಡಲಾಗಿದೆ. ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯರಾದ ಕೆ ನಜೀರ್ ಮತ್ತು ಬಿ ಬಬಿತಾ ಅವರನ್ನೊಳಗೊಂಡ ಪೂರ್ಣ ಪೀಠ ಈ ಆದೇಶವನ್ನು ಅಂಗೀಕರಿಸಿದೆ.
ಒಂಬತ್ತನೇ ತರಗತಿಗೆ ಸಾರ್ವಜನಿಕ ಪರೀಕ್ಷೆ ಇರುವುದಿಲ್ಲ. ಕೊರೋನಾ ಹರಡುವಿಕೆಯನ್ನು ಕಡೆಗಣಿಸಿ ವಿದ್ಯಾರ್ಥಿಗಳು ಒಟ್ಟಿಗೆ ಪರೀಕ್ಷೆಗೆ ಕುಳಿತುಕೊಳ್ಳುವುದು ಸಿಬಿಎಸ್‍ಇ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಆಯೋಗ ಗಮನಸೆಳೆದಿದೆ. ಆದ್ದರಿಂದ, ಬೋರ್ಡ್ ಮತ್ತು ಸಾರ್ವಜನಿಕ ಪರೀಕ್ಷೆಗಳನ್ನು ಹೊರತುಪಡಿಸಿ ಶಾಲೆಗಳಲ್ಲಿ ಆಫ್ ಲೈನ್ ಪರೀಕ್ಷೆಗಳನ್ನು ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಆಯೋಗ ಹೇಳಿದೆ. ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ ಮಕ್ಕಳ ಹಕ್ಕುಗಳ ಆಯೋಗ ಸಿಬಿಎಸ್‍ಇ ಪ್ರಾದೇಶಿಕ ಅಧಿಕಾರಿಗೆ ನಿರ್ದೇಶನ ನೀಡಿದೆ.



