ನವದೆಹಲಿ: ಅನುದಾನಿತ ಶಾಲಾ ಶಿಕ್ಷಕರು ಚುನಾವಣೆಗೆ ಸ್ಪರ್ಧಿಸುವುದನ್ನು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ತಡೆಯಾಜ್ಞೆ ಆದೇಶ ನೀಡಿದೆ.
ಅನುದಾನಿತ ಶಾಲಾ ಶಿಕ್ಷಕರು ಚುನಾವಣೆಗೆ ಸ್ಪರ್ಧಿಸುವುದು ಅಸಂವಿಧಾನಿಕ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಶಿಕ್ಷಕ ಸಲೀಂ ಮಡಪುರಂ ಮತ್ತು ಸಾರ್ವಜನಿಕ ಕಾರ್ಯಕರ್ತ ಎ.ಎನ್.ಅನೂರಾಗ್ ಈ ಆದೇಶದ ವಿರುದ್ದ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
ಸರ್ಕಾರಿ ನೌಕರರು ಚುನಾವಣೆಗೆ ಸ್ಪರ್ಧಿಸದಿರಲು ಸಂಬಂಧಿಸಿದ 1951 ರ ಕಾಯಿದೆಯ ಬಗ್ಗೆ ಹೈಕೋರ್ಟ್ ನಿಖರವಾದ ವ್ಯಾಖ್ಯಾನವನ್ನು ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿಯುವುದರೊಂದಿಗೆ, ಅನುದಾನಿತ ಶಾಲಾ ಶಿಕ್ಷಕರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಡೆತಡೆಗಳು ಇಲ್ಲವಾದಂತಾಗಿದೆ.



