ಕಾಸರಗೋಡು: ಕಾಞಂಗಾಡ್ ಪರಿಸರದ ಮರಕ್ಕಪ್ಪಂ ಕಡಲ ತೀರದಲ್ಲಿರುವ ಮಲಬಾರ್ ರೆಸಾರ್ಟ್ ಬಳಿ ವಾಸವಾಗಿರುವ ಪ್ರಕಾಶನ್(58) ಸಮುದ್ರದ ಮಧ್ಯೆ ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಹೃದಯಾಘಾತಕ್ಕೊಳಗಾದ ಘಟನೆ ಸೋಮವಾರ ನಡೆದಿತ್ತು. ಈ ವೇಳೆ ಜೊತೆಗಿದ್ದವರು ತೃಕ್ಕರಿಪುರ ಕೋಸ್ಟಲ್ ಗಾರ್ಡ್ ಪೋಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಆಗಮಿಸಿದ ಕೋಸ್ಟಲ್ ಪೋಲೀಸರು ಅಪಾಯದಲ್ಲಿದ್ದವರನ್ನು ಸಂರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಘಟನೆ ಇದೀಗ ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಜೆ.ಎಂ ಫ್ರೆಂಡ್ಸ್ ಎಂಬ ಫೈಬರ್ ದೋಣಿಯಲ್ಲಿ ಸೋಮವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಪ್ರಕಾಶನ್ ಕರ್ತವ್ಯದಲ್ಲಿದ್ದಾಗ ಹೃದಯಾಘಾತಕ್ಕೊಳಗಾದರು. ಜೊತೆಗಿದ್ದವರು ತಕ್ಷಣ ಕರಾವಳಿ ಪೋಲೀಸರಿಗೆ ಮಾಹಿತಿ ನೀಡಿದ್ದು, ಪಿಲಿಕೋಡ್‍ನ ಹಿರಿಯ ಸಿವಿಲ್ ಪೋಲೀಸ್ ಅಧಿಕಾರಿ ಕೃಷ್ಣನ್ ನಿರ್ದೇಶಾನುಸಾರ ಸೀನಿಯರ್ ಪೋಲೀಸ್ ಅಧಿಕಾರಿ ಪಿಲಿಕ್ಕೋಡ್ ನಿವಾಸಿ ರತೀಶ್ ಪ್ರಕಾಶನ್ ಕಾಞಂಗಾಡ್ ಸಂಜೀವನಿ ಆಸ್ಪತ್ರೆಗೆ ಮಿಂಚಿನ ಕಾರ್ಯಾಚರಣೆಯ ಮೂಲಕ ಕರೆದೊಯ್ದರು. ಬಳಿಕ ನಡೆಸಿದ ತುರ್ತು ಶಸ್ತ್ರಚಿಕಿತ್ಸೆಯ ಬಳಿಕ ಪ್ರಕಾಶನ್ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


