ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯೊಂದರಲ್ಲಿ ಎಐಎಡಿಎಂಕೆ ಉಚ್ಚಾಟಿತ ಮುಖಂಡೆ ವಿ. ಕೆ. ಶಶಿಕಲಾ ರಾಜಕೀಯಕ್ಕೆ ಬುಧವಾರ ಗುಡ್ ಬೈ ಹೇಳಿದ್ದಾರೆ.
ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿರುವ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ಶಶಿಕಲಾ, ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸುವಂತೆ ಹೇಳಿದ್ದಾರೆ.ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಶಶಿಕಲಾ ಇತ್ತೀಚಿಗೆ ಬಿಡುಗಡೆಯಾಗಿ ತಮಿಳುನಾಡಿಗೆ ವಾಪಸ್ ಆಗಿದ್ದರು.ಅಧಿಕಾರ ಅಥವಾ ಯಾವುದೇ ಸ್ಥಾನಮಾನವನ್ನು ಬಯಸಲಿಲ್ಲ. ಜಯಲಲಿತಾ ನಿಧನದ ನಂತರವೂ ಅವರ ಸಹೋದರಿಯಾಗಿಯೇ ಇದ್ದೇನೆ. ಈಗ, ಅಮ್ಮನ ಸರ್ಕಾರವನ್ನು ಸ್ಥಾಪಿಸಲು ನಾನು ಅಮ್ಮನನ್ನೂ ದೇವರಾಗಿ ಪರಿಗಣಿಸುತ್ತೇನೆ ಎಂದು ಶಶಿಕಲಾ ಪತ್ರದಲ್ಲಿ ತಿಳಿಸಿದ್ದಾರೆ.
ರಾಜಕೀಯ ಎದುರಾಳಿಯನ್ನು ಡಿಎಂಕೆಯನ್ನು ಚುನಾವಣೆಯಲ್ಲಿ ಮಣಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವಂತೆ ಜಯಲಲಿತಾ ಅವರ ಕಾರ್ಯಕರ್ತರಲ್ಲಿ ಮನವಿ ಮಾಡುವುದಾಗಿ ಶಶಿಕಲಾ ಹೇಳಿದ್ದಾರೆ.
ಶಶಿಕಲಾ ಈ ನಿರ್ಧಾರ ತೆಗೆದುಕೊಳ್ಳದಂತೆ ಮಾಡಿದ ಮನವೊಲಿಕೆಯ ಪ್ರಯತ್ನಗಳು ಫಲ ನೀಡಲಿಲ್ಲ ಎಂದಿರುವ ಅವರ ಸಂಬಂಧಿ ಟಿಟಿವಿ ದಿನಕರನ್, ಎಎಂಎಂಕೆ ಪ್ರತ್ಯೇಕ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಎಎಂಎಂಕೆ , ಎಐಎಡಿಎಂಕೆಯಲ್ಲಿ ವಿಲೀನಗೊಳ್ಳಲಿದೆ ಎಂದು ಎಂದಿಗೂ ನಾನು ಹೇಳಲ್ಲ ಎಂದಿದ್ದಾರೆ.





