ಉಪ್ಪಳ: ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ಆಂತರಿಕ ಮನೋಗತಗಳು ಬಹಿರಂಗಗೊಳ್ಳುತ್ತಿದ್ದು,ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ.ಅರ್. ಜಯಾನಂದ ಅವರ ಉಮೇದುವಾರಿಕೆ ಕುರಿತು ಪಕ್ಷದ ಅಂತಿಮ ತೀರ್ಮಾನದೊಂದಿಗೆ, ಪಕ್ಷದ ಮುಖಂಡರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪೋಸ್ಟರ್ ಗಳು ಪ್ರತ್ಯಕ್ಷವಾಗಿದೆ.
ಉಪ್ಪಳ ಪ್ರದೇಶ ಕೇಂದ್ರೀಕರಿಸಿ ಇಂದು ಬೆಳಿಗ್ಗೆ ಕನ್ನಡ ಮತ್ತು ಮಲೆಯಾಳ ಭಾಷೆಗಳಲ್ಲಿ ಮಂಜೇಶ್ವರ ಕ್ಷೇತ್ರಕ್ಕೆ ಕೆ.ಅರ್.ಜಯಾನಂದ ಅವರು ಬೇಡ ಎಂಬ ಪೋಸ್ಟರ್ ಗಳು ಕಂಡುಬಂದಿದೆ. ಜೊತೆಗೆ ವಿ.ಪಿ.ಪಿ.ಮುಸ್ತಫ ಅವರಿಗೆ ಸ್ಥಾನ ನೀಡಬೇಕೆಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ರವಾನೆಯಾಗುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿರುವ ಮುಸ್ತಫ ಅವರಿಗೆ ಕ್ಷೇತ್ರದಲ್ಲಿ ಹದಿನೆಂಟು ಸ್ಥಳೀಯ ಸಮಿತಿಗಳ ಬೆಂಬಲವೂ ಇದೆ ಎಂದು ಹೇಳಲಾಗಿದೆ.
ಕೆ.ಅರ್.ಜಯಾನಂದ ಅವರು ಮಂಜೇಶ್ವರದಲ್ಲಿ ಸಿಪಿಎಂ ನ್ನು ಸಕ್ರಿಯವಾಗಿ ಬೆಳೆಸುವಲ್ಲಿ ಪ್ರಮುಖರಾಗಿದ್ದು ಕನ್ನಡಿಗರಾದ ಅವರು,ಮಿತಭಾಷಿಯಾಗಿ ಸರಳ ಸಜ್ಜನ ವ್ಯಕ್ತಿತ್ವದ ಮೂಲಕ ಚಿರಪರಿಚಿತರಾಗಿದ್ದರೂ ಅವರ ಉಮೇದ್ವಾರಿಕೆಯ ವಿರುದ್ದ ಎದ್ದಿರುವ ಗುಲ್ಲು ಇಂದು ನಡೆಯಲಿರುವ ಪಕ್ಷದ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

