ನವದೆಹಲಿ : ತ್ಯಾಜ್ಯ ವಿಲೇವಾರಿ, ಮಳೆನೀರು ಕೊಯ್ಲು, ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ರಾಜ್ಯದಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ರಾಜ್ಯಗಳ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ 4608 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ 1948 ಕೋಟಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 2660 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 60,750 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಗೆ 26,710 ಕೋಟಿ ರೂ.ಸೇರಿದಂತೆ ಒಟ್ಟು 87,460 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಶಿಫಾರಸನ್ನು ಆಧರಿಸಿ ಅನುದಾನ ಬಿಡುಗಡೆ ಮಾಡಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ಶೌಚಾಲಯ, ಬಯಲು ಬಹಿರ್ದೆಸೆ ಮುಕ್ತ ಯೋಜನೆ, ಕುಡಿಯುವ ನೀರಿನ ಪೂರೈಕೆ, ಮಳೆನೀರು ಸಂಗ್ರಹ ಮತ್ತು ಸಂಸ್ಕರಣೆಗೆ ಬಳಕೆ ಮಾಡಬೇಕಿದೆ.
ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಕಳೆದ ವರ್ಷ ದಶಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆ ಹೊಂದಿರುವ ನಗರಗಳಿಗೆ 8357 ಕೋಟಿ, ದಶಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ 18,354 ಕೋಟಿಗಳನ್ನು ಒದಗಿಸಲಾಗಿದೆ. ದಶಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಿಗೆ ಮಾ.31ರಂದು 1824 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ವಾಯುಮಾಲಿನ್ಯ ನಿಯಂತ್ರಣ, ಹವಾಮಾನ ಬದಲಾವಣೆಯಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳ ಬೇಕಿದೆ.
ಶುದ್ಧ ಕುಡಿಯುವ ನೀರು ಪೂರೈಕೆ, ಘನತ್ಯಾಜ್ಯ ಸಂಸ್ಕರಣೆ, ನಗರೀಕರಣದ ಸವಾಲುಗಳ ನಿಯಂತ್ರಣ ಸೇರಿದಂತೆ ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿದ ಅನುದಾನವನ್ನು 10 ದಿನಗಳ ಒಳಗಾಗಿ ರಾಜ್ಯ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಖಾತೆಗೆ ವರ್ಗಾಯಿಸಬೇಕು. ಇಲ್ಲವಾದರೆ ವಿಳಂಬ ಕಾಲದ ಬಡ್ಡಿ ಸೇರಿ ಒಟ್ಟು ಅನುದಾನವನ್ನು ಬಿಡುಗಡೆ ಮಾಡುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳೇ ನಿರ್ವಹಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.





