ಬದಿಯಡ್ಕ: ಮಣ್ಣಿನ ಸಾಂಸ್ಕøತಿಕ ಸಂಕೇತವಾದ ಕಲೆಯ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಹೊಸ ತಲೆಮಾರಿಗೆ ದಾಟಿಸುವ ಪ್ರಯತ್ನಗಳು ಇಂದಿನ ಸಂಕೀರ್ಣ ಸ್ಥಿತಿಯಲ್ಲಿ ಸುಲಲಿತವಲ್ಲ. ಆದರೆ ಬದುಕು ಸಾರ್ಥಕವಾಗಬೇಕಿದ್ದರೆ ಪರಂಪರೆಯನ್ನು ಕಲಿಸಿಕೊಡುವ ಅನಿವಾರ್ಯತೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕು ಎಂದು ಧಾರ್ಮಿಕ ಮುಂದಾಳು, ಕಲಾಪೋಷಕ ವೆಂಕಟರಮಣ ಹೊಳ್ಳ ಕಾಸರಗೋಡು ಅವರು ತಿಳಿಸಿದರು.
ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹಾಗೂ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘ ಕೊಲ್ಲಂಗಾನ ಇದರ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಯಕ್ಷಗಾನ ಹಿಮ್ಮೇಳ-ಮುಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾ ಪ್ರಕಾರವು ಶಾಸ್ತ್ರೀಯವೂ, ಶ್ರೀಮಂತ ಪರಂಪರೆಯನ್ನು ಹೊಂದಿದ ವಿಶಿಷ್ಟ ಪ್ರಕಾರವಾಗಿದ್ದು, ಸಮರ್ಥ ಗುರುಗಳ ನಿರ್ದೇಶನದಲ್ಲಿ ಸುದೃಢ ಕಲಾ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕೃತಾರ್ಥತೆ ಮೂಡಿಬರಲಿ ಎಂದು ಅವರು ಈ ಸಂದರ್ಭ ಕರೆ ನೀಡಿದರು.
ಹಿರಿಯ ನಾಟಕ ಕರ್ತೃ, ಕವಿ ಉದಯಶಂಕರನಾರಾಯಣ ರಾವ್ ಕೊಲ್ಲಂಗಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಶ್ರೀಕ್ಷೇತ್ರ ಕೊಲ್ಲಂಗಾನದ ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾವಿದರಂತೆ ಕಲಾಪೋಷಕರು, ಉತ್ತಮ ಪ್ರೇಕ್ಷಕರೂ ಕಲೆಯ ಸಮೃದ್ದತೆಗೆ ಕಾರಣರಾಗುತ್ತಾರೆ. ಹಿರಿಯರ ಕಲಾ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಪ್ರಯತ್ನಗಳು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ಯಕ್ಷಗಾನ ಗುರುಗಳಾದ ಪಡುಮಲೆ ಜಯರಾಮ ಪಾಟಾಳಿ, ಕೇಶವ ಭಟ್ ಕಂಬಾರು, ಕಲಾ ಪೋಷಕ ಮಂಜುನಾಥ ಡಿ.ಮಾನ್ಯ, ಡಾ.ಮನೋಹರ ಕಲ್ಲಕಟ್ಟ, ಪ್ರೊ.ಎ.ಶ್ರೀನಾಥ್, ಪತ್ರಕರ್ತ, ಕಲಾವಿದ ನಾ.ಕಾರಂತ ಪೆರಾಜೆ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ಕರ್ನಾಟಕ ಜಾನಪದ ಪರಿಷತ್ತಿನ ಪ್ರಸ್ತುತ ಸಾಲಿನ ಪ್ರಶಸ್ತಿ ವಿಜೇತರಾದ ಪ್ರೊ.ಎ.ಶ್ರೀನಾಥ್ ಅವರನ್ನು ಸಹೋದರರಾದ ಉದಯಶಂಕರನಾರಾಯಣ ರಾವ್, ತಂತ್ರಿ ಗಣಾಧಿರಾಜ ಉಪಾಧ್ಯಾಯ, ಲಕ್ಷ್ಮೀಶ ರಾವ್ ಕೊಲ್ಲಂಗಾನ ಅವರು ಜಂಟಿಯಾಗಿ ಸನ್ಮಾನಿಸಿ ಗೌರವಿಸಿದರು. ಪ್ರಜ್ವಲ್ ಕುಮಾರ್ ಸ್ವಾಗತಿಸಿ, ರಾಧಿಕಾ ರಾಜೇಶ್ ಕೊಲ್ಲೂರು ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ರವಿ ಶೆಟ್ಟಿ ಕೊಲ್ಲಂಗಾನ ಸಹಕರಿಸಿದರು. ಶರಣ್ಯ ಹಾಗೂ ಶ್ರೀರಕ್ಷಾ ಪ್ರಾರ್ಥನೆ ಹಾಡಿದರು. ಬಳಿಕ ಹಿಮ್ಮೇಳ ಮುಮ್ಮೇಳ ತರಬೇತಿಗಳು ನಡೆಯಿತು. ಅಪರಾಹ್ನ ಅಗ್ರಮಾನ್ಯ ಕಲಾವಚಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರಸಂಗ ಪ್ರಸ್ತುತಿಗೊಂಡಿತು.






