ಕುಂಬಳೆ: ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆಯ ಸೀತಾಂಗೋಳಿಯಿಂದ ಪೆರ್ಣೆ ಮಧ್ಯೆ ಇರುವ ಬೃಹತ್ ಮಾವಿನಮರಗಳಿಗೆ ಕೊಡಲಿಯೇಟು ಬೀಳುವ ಬಗ್ಗೆ ಭೀತಿ ವ್ಯಕ್ತವಾಗುತ್ತಿದ್ದಂತೆ ಪರಿಸರಪ್ರಿಯರು ಮರದ ರಕ್ಷಣೆಗೆ ಮುಂದಾಗಿದ್ದಾರೆ. ಮರದ ಬುಡದಲ್ಲಿ ಪ್ಲೇಕಾರ್ಡ್ ಮೂಲಕ ಊರವರು ಪ್ರತಿಭಟನೆ ನಡೆಸಿದ್ದಾರೆ. 'ಮರದಿಂದಾಗಿ ನಾವು, ನಮ್ಮಿಂದಾಗಿ ಮರವಲ್ಲ', ಗೋ ಬ್ಯಾಕ್ ಟಿಂಬರ್ ಮಾಫಿಯಾ, ಈ ಮರಗಳು ಅನಾಥವಲ್ಲ, ವೃಕ್ಷಗಳನ್ನು ಸಂರಕ್ಷಿಸಿ' ಮುಂತಾದ ಘೋಷಣೆಗಳನ್ನು ಹೊತ್ತ ಪ್ಲೇಕಾರ್ಡ್‍ಗಳನ್ನು ಮರದ ಬುಡದಲ್ಲಿ ನೆಡಲಾಗಿತ್ತು.
ರಸ್ತೆ ಅಭಿವೃದ್ಧಿ ಯೋಜನೆಯನ್ವಯ ಬೃಹತ್ ಮನರಗಳನ್ನು ಕಡಿದುರುಳಿಸಲು ಸಂಚು ನಡೆಸುತ್ತಿರುವ ಬಗ್ಗೆ ಮಾಧ್ಯಮಗಳು ಸಮಗ್ರ ಲೇಖನ ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತ ನಾಗರಿಕರು ಮರಗಳ ಮಾರಣಹೋಮದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು.
ಈ ಬಗ್ಗೆ ಮಂಗಳವಾರ ಸೀತಾಂಗೋಳಿ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಪರಿಸರದಲ್ಲಿ ನಡೆದ ಸಭೆಯಲ್ಲಿ ಕ್ರಿಯಾ ಸಮಿತಿ ರಚಿಸಲಾಯಿತು. ರಸ್ತೆ ಅಗಲೀಕರಣ ಅಗತ್ಯವಾದರೂ ಫಲ ಭರಿತ ಮರಗಳನ್ನು ಕಡಿದುರುಳಿಸುವ ಬಗ್ಗೆ ಸಮಿತಿ ಕಟುವಾದ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಈ ಬಗ್ಗೆ ಅಧಿಕೃತರಿಗೆ ಮನವಿ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕ್ರಿಯಾ ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿಸೋಜ ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಪರಿಸರ ಹೋರಾಟಗಾರ ಅಂಬಲತ್ತರ ಕುಂಞÂಕಣ್ಣನ್, ಮಿಸ್ರಿಯ, ವೆಂಕಪ್ಪ ಭಟ್, ಮಹಾಲಿಂಗ ಕೆ., ಮಾನ ಮಾಸ್ತರ್, ಮಾಸ್ಟರ್ ಅಖಿಲ್ ಮೊದಲಾದವರು ಉಪಸ್ಥಿತರಿದ್ದರು.
'ರೀ ಬ್ಯುಲ್ಡ್ ಕೇರಳ' ಯೋಜನೆಯನ್ವಯ ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆಯನ್ನು ಸುಮಾರು 150ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ಲಭಿಸಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ಬೃಹತ್ ಮರಗಳಿಗೆ ಕೊಡಲಿಯೇಟು ಬೀಳುತ್ತಿರುವುದು ಇದೀಗ ಭಾರೀ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.






