ಮುಂಬೈ : ಕರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಸಮಸ್ಯೆ ಪೊಲೀಸರನ್ನು ಕಾಡುತ್ತಿದೆ. ಕರೊನಾ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಿಯಾದ ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಬೆಲೆಗೆ ಮಾರುವ ಪ್ರಯತ್ನವನ್ನು ದುಷ್ಕರ್ಮಿಗಳು ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ಗಳಿಗೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ ಏಪ್ರಿಲ್ 8 ರಂದು ಮಹಾರಾಷ್ಟ್ರ ಸರ್ಕಾರ ಈ ಇಂಜೆಕ್ಷನ್ಗಳಿಗೆ ಹೆಚ್ಚು ಹಣ ಪಡೆಯುವುದನ್ನು ತಡೆಯಲು ಅದರ ಬೆಲೆಯನ್ನು ಒಂದು ವಯಲ್ಗೆ 1,100 ರೂ.ಗಳಿಂದ 1,400 ರೂ.ಗಳ ನಡುವೆ ನಿಗದಿಗೊಳಿಸಿದೆ. ಈ ವಿಪತ್ತಿನ ಸಮಯದಲ್ಲಿ ಈ ಔಷಧಿಯನ್ನು ಶೇಖರಿಸಿಡುವುದು ಮತ್ತು ಬ್ಲಾಕ್ ಮಾರ್ಕೆಟ್ನಲ್ಲಿ ಮಾರುವುದರ ವಿರುದ್ಧ ಔಷಧಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದೆ.
ನಿನ್ನೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಒಂದು ಡಜನ್ ರೆಮ್ಡೆಸಿವಿರ್ ಇಂಜೆಕ್ಷನ್ ವಯಲ್ಗಳೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಪ್ಪತ್ತೆರಡು ವರ್ಷ ವಯಸ್ಸಿನ ಸರ್ಫರಾಜ್ ಹುಸೈನ್ ಎಂಬುವ ಬಂಧಿತ ವ್ಯಕ್ತಿ.
ಕಳ್ಳ ಮಾರುಕಟ್ಟೆಯಲ್ಲಿ ಔಷಧಿ ಮಾರುವ ಪ್ರಯತ್ನದ ಬಗ್ಗೆ ಬಂದ ಖಚಿತ ಮಾಹಿತಿಯ ಮೇಲೆ ಅಂಧೇರಿ ಈಸ್ಟ್ನ ಅಪರಾಧ ವಿಭಾಗದ ಪೊಲೀಸರು ನಿನ್ನೆ ಸಂಜೆ ಶೋಧ ನಡೆಸಿದರು. ಆ ಸಮಯದಲ್ಲಿ ಹುಸೈನ್ 12 ವಯಲ್ಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸದರಿ ವಯಲ್ಗಳನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು ಕೇಸು ದಾಖಲಿಸಿದ್ದಾರೆ.






