ಮಂಜೇಶ್ವರ: ಭಾರತವೂ ಸೇರಿದಂತೆ ವಿಶ್ವದ ರಾಷ್ಟ್ರಗಳ ಇಂದಿನ ಸ್ಥಿತಿ-ಗತಿ ತೀವ್ರ ಕಳವಳಕಾರಿಯಾಗಿದ್ದು, ಕಂಡು-ಕೇಳರಿಯದ ಮಹಾಮಾರಿ ಸೋಂಕಿನ ಕಾರಣ ತತ್ತರಿಸಿರುವುದು ಮಾನವ ಕುಲ ಕೋಟಿಗೆ ಪ್ರಕೃತಿ ನೀಡಿರುವ ಸಂದೇಶವಾಗಿದೆ. ಮನುಷ್ಯನ ಅಪರಿಮಿತ ವೇಗಕ್ಕೆ ನೀಡಿರುವ ಈ ತಡೆಯಿಂದ ನಾವು ಪಾಠ ಕಲಿಯಬೇಕಿದೆ ಎಂದು ಖ್ಯಾತ ವಾಗ್ಮಿ, ಗೀತ ಸಾಹಿತ್ಯ ಸಂಭ್ರಮದ ಸಾಹಿತಿ ವಿಠಲ ನಾಯಕ್ ಕಲ್ಲಡ್ಕ ಅವರು ತಿಳಿಸಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಬಹುಮುಖಿ ಕಾರ್ಯಕ್ರಮಗಳ ಭಾಗವಾಗಿ ವಿವಿಧ ವಲಯಗಳಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕಾರ್ಯಕ್ರಮಗಳು ನಾಡಿನ ಉದ್ದಗಲ ಆಯೋಜನೆಗೊಳ್ಳುತ್ತಿದ್ದು ಇದರ ಅಂಗವಾಗಿ ಷಷ್ಠ್ಯಬ್ದ ಸಮಿತಿ ಮಂಜೇಶ್ವರ ವಲಯದ ನೇತೃತ್ವದಲ್ಲಿ ಇತ್ತೀಚೆಗೆ ಮಂಜೇಶ್ವರ ಹೊಸಬೆಟ್ಟು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಜಮ್ಮದಮನೆಯಲ್ಲಿ ಹಮ್ಮಿಕೊಂಡ ತುಳು ಭಾಷೆ, ಸಂಸ್ಕøತಿಯ ಜಾಗೃತಿಗಾಗಿ "ತುಳು ತುಲಿಪು-ಬದ್ಕ್ ಗೊಂಜಿ ಕೈತುಡರ್" ಎಂಬ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಕೃತಿಯನ್ನು ಮರೆತು ಮಾನವನ ವ್ಯವಹಾರ ವಿಸ್ತರಿಸಿದ್ದರಿಂದ ಇಂದು ದುಃಖಕರ ಪ್ರಸಂಗಗಳು ನಮ್ಮಿದಿರು ಕಳವಳ ಮೂಡಿಸಿವೆ. ಭಾರತೀಯ ಪರಂಪರೆ, ಸಂಸ್ಕøತಿಯ ವಿಮುಖತೆ ಸದಾ ಸಂಕಷ್ಟಗಳಿಗೆ ಕಾರಣವಾಗುವುದೇ ಹೊರತು ಉತ್ಕರ್ಷೆ ಸಾಧ್ಯವಾಗದು. ನಮ್ಮ ಬದುಕಿನ ಧ್ಯೇಯ ಯಾವತ್ತಿಗೂ ನಿಖರವಾಗಿರಬೇಕಿದ್ದು, ಮುಂದಿನ ತಲೆಮಾರನ್ನು ಬೆಳೆಸುವ ಜವಾಬ್ದಾರಿ ಇದೆ. ಪರಿಶುದ್ದ ಪ್ರಕೃತಿಯನ್ನು ಬಿಟ್ಟು, ಸಂಸ್ಕಾರವನ್ನು ಕೊಟ್ಟು ಬದುಕನ್ನು ಸಾರ್ಥಕಗೊಳಿಸುವುದೇ ಭಾರತೀಯತೆಯ ಲಕ್ಷಣ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಇನ್ನೋರ್ವೆ ಮುಖ್ಯ ಅತಿಥಿಯಾಗಿದ್ದು, ಉಪನ್ಯಾಸ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಾದಂಬರಿ ಪ್ರಶಸ್ತಿ ವಿಜೇತೆ ರಾಜಶ್ರೀ ಟಿ.ರೈ ಪೆರ್ಲ ಅವರು, ಹಣ, ಆಭರಣಗಳ ಸಂಗ್ರಹದ ಆಸಕ್ತಿಯ ಬದಲು ಪರಂಪರೆಯ ಸಾಧನೆಗಳ ಆಕರಗಳ ಸಂಗ್ರಹ, ಸಂರಕ್ಷಣೆಯ ಬಗ್ಗೆ ಕಾರ್ಯೋನ್ಮುಖರಾಗಿದ್ದರೆ ಕೊರೊನಾ ಸಹಿತ ಯಾವುದೇ ಸಂಕಷ್ಟದಿಂದಲೂ ಪಾರಾಗುವ ಜ್ಞಾನ ಕಾಶಿ ನಮ್ಮ ಪರಂಪರೆಯೊಳಗಿದೆ ಎಂದರು. ಅನೇಕ ಸಸ್ಯ ಪ್ರಬೇಧಗಳ ವೈದ್ಯಕೀಯ ಅರಿವು ನಮಗಿಂದು ತಿಳಿದಿಲ್ಲ. ಆದರೆ ಪ್ರತಿಯೊಂದು ಸಸ್ಯದ, ಗಿಡ, ಮರ, ಬಳ್ಳಿ, ಬೇರುಗಳ ಆಯುರ್ವೇದೀಯ ಸ್ಪಷ್ಟ ಚಿತ್ರಣಗಳು ನಾಶವಾಗುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಅದರ ಸಂರಕ್ಷಣೆ, ಅಧ್ಯಯನ ಮತ್ತು ಅರಿವಿನ ವಿಸ್ತಾರತೆಗೆ ಅವಕಾಶಗಳು ಮೂಡಿಬರಬೇಕು ಎಂದರು. ಮನೆಯಲ್ಲಿ ಹಿರಿಯರು ಅನುಸರಿಸುವ ಕ್ರಮಗಳನ್ನು ಕಿರಿಯರು ಅನುಸರಿಸುವವರಾಗಿದ್ದು, ಜೀವನ ಪಾಠವನ್ನು ಮಕ್ಕಳಿಗೆ ಕಲಿಸಬೇಕು. ವಿಧ್ಯೆ, ಔಷಧಿ ಮತ್ತು ಆಧ್ಯಾತ್ಮಗಳು ಎಂದಿಗೂ ವ್ಯಾಪಾರಿಕರಣವಾಗಬಾರದು ಎಂದು ಅವರು ವಿಶ್ಲೇಶಿಸಿದರು.
ಷಷ್ಠ್ಯಬ್ದ ಕೇಂದ್ರ ಸಮಿತಿಯ ಮುಖ್ಯ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ, ಸಾದ್ವಿ ಮಾತಾನಂದಮಯೀ, ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು. . ಷಷ್ಠ್ಯಬ್ದ ಸಮಿತಿ ಮಂಜೇಶ್ವರ ವಲಯದ ಗೌರವಾಧ್ಯಕ್ಷ ಡಾ.ಶ್ರೀಧರ ಭಟ್ ಉಪ್ಪಳ, ಅಧ್ಯಕ್ಷ ಶಶಿಧರ ಶೆಟ್ಟಿ ಜಮ್ಮದಮನೆ, ಕಾರ್ಯಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು, ಮುಖ್ಯ ಕಾರ್ಯದರ್ಶಿ ಅರವಿಂದಾಕ್ಷ ಭಂಡಾರಿ, ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ಹರಿಶ್ಚಂದ್ರ ಮಂಜೇಶ್ವರ, ಪ್ರಮುಖರಾದ ಪ್ರಭಾಕರ ರೈ ಕಲ್ಪಣೆ, ಜಯಪ್ರಕಾಶ್ ಶೆಟ್ಟಿ ಅಂಗಡಿದಾರು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಜಾ ಬೆಳ್ಚಡ ಉದ್ಯಾವರ ಮಾಡ, ದಿನಕರ ಹೊಸಂಗಡಿ, ರಾಮಚಂದ್ರ ಸಿ.ಉಪ್ಪಳ, ವಿನೋದ್ ಪಾವಳ, ರೋಹಿತ್ ಭಂಡಾರಿ ಕುರಿಯ ಮೊದಲಾದವರು ಉಪಸ್ಥಿತರಿದ್ದರು.
ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು.






