ಕಾಸರಗೋಡು : ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಲಭಿಸಬೇಕು. ಸಂಸ್ಕಾರ ಮನೆಯಿಂದಲೇ ಆರಂಭಗೊಳ್ಳಬೇಕು. ಈ ಮೂಲಕ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಠ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ ಕಾಸರಗೋಡು ವಲಯ ಸಮಿತಿ ಮತ್ತು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ಐದನೇ ಸರಣಿ ಕಾರ್ಯಕ್ರಮದಂಗವಾಗಿ ಆಯೋಜಿಸಲಾದ ಕುಂಕುಮಾರ್ಚನೆ, ಹನುಮಾನ್ ಚಾಲಿಸ್ ಪಠಣ, ಹರಿಕಥಾ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಸಾದ್ವಿ ಅವರು ಮಾತನಾಡಿದರು.
ಕಾಸರಗೋಡು ಮಹಿಳಾ ವಲಯ ಸಮಿತಿ ಗೌರವಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಡಾ.ಜಯಶ್ರೀ ನಾಗರಾಜ, ಪ್ರೇಮಲತಾ ಎಲ್ಲೋಜಿ ರಾವ್, ಕುಸುಮ ಪೆರ್ಮುಖ, ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಉಪಸ್ಥಿತರಿದ್ದರು.
ರಂಗ ಕಲಾವಿದೆ ಜಯಶ್ರೀ ದಿವಾಕರ್ ಸ್ವಾಗತಿಸಿ, ಕಾಸರಗೋಡು ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ಗುರು ಪ್ರಸಾದ್ ಕೋಟೆಕಣಿ ಪ್ರಾಸ್ತವಿಕ ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಮುಳ್ಳೇರಿಯ ಹವ್ಯಕ ಮಂಡಲ ಮಾತೃ ಸಮಿತಿ ಪ್ರಧಾನೆ ಕುಸುಮ ಪೆರ್ಮುಖ ಅವರ ನೇತೃತ್ವದಲ್ಲಿ ಕುಂಕುಮಾರ್ಚನೆ ನಡೆಯಿತು. ಮಂಜುಳಾ ಇರಾ ಅವರಿಂದ ಶ್ರೀ ರಾಮ ಪಟ್ಟಾಭಿಷೇಕ ಹರಿಕಥಾ ಸತ್ಸಂಗ ಜರಗಿತು.





