ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬರಿದಾಗಿರುವ 49 ಹುದ್ದೆಗಳಲ್ಲಿ ಡಾಕ್ಟರರ ನೇಮಕಾತಿಗೆ ಸರಕಾರಿ ಮಟ್ಟದಲ್ಲಿ ಯತ್ನ ನಡೆಸುವುದಾಗಿ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್ ಗಳಲ್ಲೂ ಪೋಲೀಸ್ ತಪಾಸಣೆ ಬಿಗಿಗೊಳಿಸಲಾಗುವುದು. ಜಿಲ್ಲೆಯ ಹಾರ್ಬರ್ ಗಳ ಮುಚ್ಚುಗಡೆ ನಡೆಸಬೇಕು, ಮೀನುಗಾರಿಕೆ ನಡೆಸಕೂಡದು ಎಂದು ಸಭೆ ತೀರ್ಮಾನಿಸಿದೆ. ಇತರ ರಾಜ್ಯಗಳ ಕಾರ್ಮಿಕರಿಗೆ ಕಿಟ್ ತುರ್ತಾಗಿ ವಿತರಿಸಲಾಗುವುದು. ಅವರ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು. ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆ ಕಾರ್ಮಿಕರ ಕಾಯಕಕ್ಕೆ ತಡೆಯಾಗಕೂಡದು. ಪ್ರದೇಶವೊಂದರ ಒಂದು ಕಾಯಕದಲ್ಲಿ ಗರಿಷ್ಠ 5 ಮಂದಿಯನ್ನು ಬಳಸುವ ಕ್ರಮ ನಡೆಯಬೇಕು. ಬೀಡಿ ಕಾರ್ಮಿಕರ ಕಾಯಕಕ್ಕೆ ತಡೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಬೇಕು. ಸರಕಾರದ ನಿರ್ಮಾಣ ಕಾಯಕಗಳು ಸಂದರ್ಭೋಚಿತವಾಗಿ ಪೂರ್ಣಗೊಳ್ಳಲಿದ್ದು, ತಡೆಯಿಲ್ಲದೆ ನಡೆಯುವಂತೆ ಖಚಿತಪಡಿಸಬೇಕು. ಜಿಲ್ಲೆಯ 6 ಬ್ಲೋಕ್ ಪಂಚಾಯತ್ ಗಳಿಗೆ ಮಂಜೂರು ಮಾಡಿರುವ ಆಂಬುಲೆನ್ಸ್ ಗಳ ಚಟುವಟಿಕೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರು ಭಾಗವಹಿಸಿದ್ದರು.



