ಚಿರಯಿಲ್ಕಿಳಿ/ತಿರುವನಂತಪುರ:ಇಂದು ತಿರುವನಂತಪುರದಲ್ಲಿ ಎಡರಂಗವು ಎರಡನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ಅಪರಾಹ್ನ ಸೆಂಟ್ರಲ್ ಸ್ಟೇಡಿಯಂನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.ಅದೂ 500 ಮಂದಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ. ಎಡರಂಗದ ಈ ನಿರ್ಧಾರದ ಬಗ್ಗೆ ನ್ಯಾಯಾಲಯ ಸಹಿತ ಸರ್ವತ್ರ ಟೀಕೆಗೊಳಗಾಗಿದ್ದು, ಇದೀಗ ಕಾಂಗ್ರೆಸ್ಸ್ ಚೆಕ್ ಮೇಟ್ ನೀಡಿದೆ!
ಯುವ ಕಾಂಗ್ರೆಸ್ ಜಿಲ್ಲಾ ಮುಖಂಡರೊಬ್ಬರು 500 ಜನರನ್ನು ಪಾಲ್ಗೊಳ್ಳಿಸಿ ತನ್ನ ವಿವಾಹ ಸಮಾರಂಭ ನಡೆಸಲು ಪೊಲೀಸರಿಂದ ಅನುಮತಿ ಕೋರಿದ್ದಾರೆ. ಅಜೂರ್ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಮುತ್ತಪ್ಪಲಂ ಸಾಜಿತ್ ಅವರು ಚಿರಯಿಲ್ಕಿಳಿ ಪೊಲೀಸರಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಪೊಲೀಸರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.
ಠಾಣಾ ಎಸ್‌ಐ ನೌಫಾಲ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ, ಸಾಜಿತ್ ತನ್ನ ವಿವಾಹ ಸಮಾರಂಭದಲ್ಲಿ 500 ಮಂದಿ ಅತಿಥಿಗಳನ್ನು ಪಾಲ್ಗೊಳಿಸಲು ಅನುಮತಿ ಕೋರಿರುವರು.
ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ರಾಜ್ಯ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯಲಿದೆ ಎಂದು ಸಾಜಿತ್ ಅಫಿಡವಿಟ್ ನಲ್ಲಿ ಬೊಟ್ಟುಮಾಡಿದ್ದಾರೆ. ವಿವಾಹ ಶಾರ್ಕರ ದೇವಾಲಯದ ಮೈದಾನದಲ್ಲಿ ನಡೆಯಲಿದ್ದು, ಇದು ಸೆಂಟ್ರಲ್ ಸ್ಟೇಡಿಯಂಗಿಂತ ದೊಡ್ಡದಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜೂನ್ 15 ರಂದು ನಿಗದಿಯಾಗಿರುವ ವಿವಾಹದ ಆಹ್ವಾನವನ್ನು ಸಹ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಸಾಮಾಜಿಕ ಅಂತರ ಮತ್ತು ಕೊರೋನಾಗೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಆಸನಗಳನ್ನು ಸಿದ್ಧಪಡಿಸಲಾಗುವುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರಾಗಿ ಮತ್ತು ಜನರ ಪ್ರತಿನಿಧಿಯಾಗಿ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳಂತೆಯೇ ತನಗೂ ಹಕ್ಕುಗಳಿವೆ ಎಂದು ಸಾಜಿತ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ, ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಸಮಾಲೋಚಿಸಿದ ಬಳಿಕ ಉತ್ತರಿಸಲಾಗುವುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.




