ತಿರುವನಂತಪುರ: ಎರಡನೇ ಬಾರಿ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಗುರುವಾರ ಅಪರಾಹ್ನ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರಮಾಣ ವಚನ ಬೋಧಿಸಿದರು. ತಿರುವನಂತಪುರದ ಕೇಂದ್ರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಇಪ್ಪತ್ತೊಂದು ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ನಾಲ್ಕು ದಶಕಗಳ ಇತಿಹಾಸದಲ್ಲಿ ಸತತವಾಗಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಇದೇ ಮೊದಲಾಗಿದೆ. ಪ್ರಮಾಣ ವಚನ ಸ್ವೀಕಾರದ ಬಳಿಕ ಮೊದಲ ಸಚಿವ ಸಂಪುಟ ಸಭೆ ಸಂಜೆ 5.30 ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸುಮಾರು 500 ಜನರು ಭಾಗವಹಿಸಲು ನಿರ್ಧರಿಸಲಾಗಿತ್ತು, ಆದರೆ ನಂತರ ಹೈಕೋರ್ಟ್‍ನ ಟೀಕೆಗಳು ಸೇರಿದಂತೆ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.
ಪಿಣರಾಯಿ ವಿಜಯನ್ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೊದಲು ಸಿಪಿಎಂ ಕೇಂದ್ರ ಘಟಕದ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರಿಗೆ ಹಸ್ತ ಲಾಘವ ನೀಡುವ ಮೂಲಕ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿಯ ಬಳಿಕ ಸಿಪಿಐ ಪ್ರತಿನಿಧಿ ಕೆ ರಾಜನ್ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲಿಟ್ ಬ್ಯೂರೋ ಸದಸ್ಯರಾದ ಎಸ್ ರಾಮಚಂದ್ರನ್ ಪಿಳ್ಳೈ, ಎಂ.ಎ. ಬೇಬಿ, ಕೊಡಿಯೇರಿ ಬಾಲಕೃಷ್ಣನ್, ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಮತ್ತು ಇತರ ಪ್ರಮುಖ ಎಡಪಂಥೀಯ ಮುಖಂಡರು ಉಪಸ್ಥಿತರಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯಾವುದೇ ಯುಡಿಎಫ್ ನಾಯಕರು ಭಾಗವಹಿಸಿರಲಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಎಲ್‍ಡಿಎಫ್ 99 ಸ್ಥಾನಗಳನ್ನು ಗೆದ್ದಿದ್ದು ಎರಡನೇ ಬಾರಿ ಅಧಿಕಾರದ ಗದ್ದುಗೆಗೆ ಏರಿದೆ. ಕೋವಿಡ್ ನಿಬಂಧನೆಗಳನ್ನು ಅನುಸರಿಸಿ ಸೆಂಟ್ರಲ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಪಾಸ್ ಹೊಂದಿರುವವರಿಗೆ ಮಾತ್ರ ಸಮಾರಂಭಕ್ಕೆ ಪ್ರವೇಶಿಸಲು ಅವಕಾಶವಿತ್ತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ, ವಿಜಿಲೆನ್ಸ್, ಐಟಿ ಮತ್ತು ಸಾರ್ವಜನಿಕ ಆಡಳಿತ ಇಲಾಖೆಗಳ ನಿರ್ವಹಣೆಯನ್ನು ಮುಂದುವರಿಸಲಿದ್ದಾರೆ. ಎಂ.ವಿ.ಗೋವಿಂದನ್ ಸ್ಥಳೀಯಾಡಳಿತ, ಅಬಕಾರಿ, ಕೆ ರಾಧಾಕೃಷ್ಣನ್ ದೇವಸ್ವಂ, ಹಿಂದುಳಿದ ಕಲ್ಯಾಣ, ಪಿ ರಾಜೀವ್ ಕೈಗಾರಿಕಾ ಕಾನೂನು, ಕೆ.ಎನ್. ಬಾಲಗೋಪಾಲ್ ವಿತ್ತ, ವಿ.ಎನ್. ವಾಸವನ್ ಸಹಕಾರಿ ಮತ್ತು ರಿಜಿಸ್ಟ್ರೇಷನ್, ಸಜಿ ಚೆರಿಯಾನ್ ಮೀನುಗಾರಿಕೆ ಮತ್ತು ಸಾಂಸ್ಕøತಿಕ ಖಾತೆ, ವಿ ಶಿನಂಕುಟ್ಟಿ ಉದ್ಯೋಗ ಹಾಗೂ ಸಾರ್ವಜನಿಕ ಶಿಕ್ಷಣ, ಪ್ರೊ.ಆರ್.ಬಿಂದು ಉನ್ನತ ವಿದ್ಯಾಭ್ಯಾಸ, ಪಿ.ಎ.ಮೊಹಮ್ಮದ್ ರಿಯಾಸ್ ಲೋಕೋಪಯೋಗಿ, ವೀಣಾ ಜೋರ್ಜ್ ಆರೋಗ್ಯ, ವಿ ಅಬ್ದುರಹಮಾನ್ ವಿದೇಶ ಖಾತೆ ಹಾಗೂ ಅಲ್ಪಸಂಖ್ಯಾತ ಕ್ಷೇಮ, ಕೆ.ಕೃಷ್ಣನ್ ಕುಟ್ಟಿ ವಿದ್ಯುತ್ ಖಾತೆ, ರೋಷಿ ಅಗಸ್ಟಿನ್ ನೀರಾವರಿ, ಅಹಮ್ಮದ್ ದೇವರ್ಕೋವಿಲ್ ಬಂದರು ಖಾತೆ, ಆಂಟನಿ ರಾಜು ರಸ್ತೆಸಾರಿಗೆ ಖಾತೆ, ಎ.ಕೆ.ಶಶೀಂದ್ರನ್ ಅರಣ್ಯ ಖಾತೆ, ಜೆ.ಚಿಂಚುರಾಣಿ ಪಶುಸಂಗೋಪನಾ ಖಾತೆ ಹಾಗೂ ಹಾಲು ಅಭಿವೃದ್ದಿ ಖಾತೆ, ಕೆ.ರಾಜನ್ ರೆವೆನ್ಯೂ ಖಾತೆ, ಪಿ.ಪ್ರಸಾದ್ ಕೃಷಿ ಖಾತೆ, ಜಿ.ಆರ್.ಅನಿಲ್ ಆಹಾರ ಖಾತೆ ಎಂಬಂತೆ ಸಚಿವ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.






