ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೇ ಮೇ 30ರಂದು ಏಳು ವರ್ಷಗಳನ್ನು ಪೂರೈಸಲಿದೆ. ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ಎರಡು ವರ್ಷ ಪೂರೈಸಲಿದೆ. ಕಳೆದ ವರ್ಷ ತನ್ನ ಪಕ್ಷದ ಸಾಧನೆಗಳ ಕುರಿತ ಪರಿಚಯಕ್ಕೆ ಪಕ್ಷ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಆದರೆ ಏಪ್ರಿಲ್‌ನಿಂದ ಕೊರೊನಾ ಎರಡನೇ ಅಲೆ ಆರಂಭವಾಗಿ ಸಾವು ನೋವು ಸಂಭವಿಸುತ್ತಿರುವ ಕಾರಣ ಯಾವುದೇ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ. ನಡ್ಡಾ ಹೇಳಿಕೊಂಡಿದ್ದಾರೆ.
ಪಕ್ಷದ ವಾರ್ಷಿಕೋತ್ಸವದ ಬದಲು ಹಲವು ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
"ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ, ಕೊರೊನಾದಂಥ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಜನರಿಗೆ ಸಹಾಯ ಮಾಡುವ ಕುರಿತು ಪಕ್ಷ ಆಲೋಚಿಸಬೇಕಾಗಿದೆ. "ಸೇವೆಯೇ ಸಂಘಟನೆ" ಎಂಬ ಯೋಜನೆ ಮೂಲಕ ಜನರಿಗೆ ಧನ್ಯವಾದ ಸಲ್ಲಿಸುತ್ತಿದ್ದೇವೆ. ಜನರು ನಮ್ಮನ್ನು ಅಧಿಕಾರಕ್ಕೆ ತಂದರು. ಅವರ ಕಾರಣಕ್ಕೇ ಕಳೆದ ಏಳು ವರ್ಷಗಳಿಂದ ಪಕ್ಷ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ" ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಹಳ್ಳಿಗಳಿಗೂ ಹರಡುತ್ತಿದೆ. ಚಿಕ್ಕ ವಯಸ್ಸಿನವರಿಗೂ ಕೊರೊನಾ ಅಪಾಯಕಾರಿಯಾಗುತ್ತಿದೆ. ಹೀಗಾಗಿ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಬೇಡಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆಯುವ ಮೂಲಕ ಕೋರಿಕೊಂಡಿದ್ದಾರೆ.
ಕೊರೊನಾದಿಂದ ಅನಾಥರಾಗಿರುವ ಮಕ್ಕಳ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಿ ಮೇ 30ರಂದು ಯೋಜನೆ ಬಿಡುಗಡೆ ಮಾಡಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವುದಾಗಿಯೂ ತಿಳಿದುಬಂದಿದೆ.
ದೇಶದಲ್ಲಿ ಕೊರೊನಾ ಸೋಂಕು ಕೆಟ್ಟ ಪರಿಸ್ಥಿತಿಯನ್ನು ಹುಟ್ಟುಹಾಕಿದೆ. ಸಾವಿರಾರು ಮಕ್ಕಳು ಅನಾಥರಾಗುತ್ತಿದ್ದಾರೆ. ಅವರ ಭವಿಷ್ಯ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮಕ್ಕಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಾಜ್ಯದ ಸ್ಥಿತಿಗತಿಗಳನ್ನು ಅರಿತುಕೊಂಡು ಕಾರ್ಯಕ್ರಮ ರೂಪಿಸಿ ಎಂದು ನಡ್ಡಾ ಮುಖ್ಯಮಂತ್ರಿಗಳಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಸಮಾಜದ ಎಲ್ಲಾ ಸ್ಥರದವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸೇವೆಯೇ ಸಂಘಟನೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವುದು ನಮ್ಮ ಬಹುಮುಖ್ಯ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ "ನಮ್ಮ ವಾರ್ಡ್ ಕೊರೊನಾ ಮುಕ್ತ" ಎಂಬ ಮತ್ತೊಂದು ಅಭಿಯಾನ ಹಮ್ಮಿಕೊಂಡಿದ್ದು, ಈ ಮೂಲಕ ಕೊರೊನಾ ಸೋಂಕಿನ ಕುರಿತು ಕೇಂದ್ರ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವುದಾಗಿ ಮಾಹಿತಿ ನೀಡಿದ್ದಾರೆ.



