ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆಯ ಬೇಡಿಕೆಯನ್ನು ಮುಂದಿರಿಸಿ ಯುವ ಕಾಂಗ್ರೆಸ್ ನಾಯಕತ್ವ ಪುನರ್ರಚನೆ ಮಾಡುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಕಳುಹಿಸಿದೆ. ಕೆಪಿಸಿಸಿ ಮತ್ತು ಡಿಸಿಸಿಯ ಹೆಬ್ಬುಲಿಗಳ ಸಮಿತಿಗಳು ಮತ್ತು ಕೆಎಸ್‍ಯು ಮತ್ತು ಯುವ ಕಾಂಗ್ರೆಸ್ ರಾಜ್ಯ ಸಮಿತಿಗಳನ್ನು ವಿಸರ್ಜಿಸುವಂತೆ ಪತ್ರದಲ್ಲಿ ಬೇಡಿಕೆ ಇರಿಸಲಾಗಿದೆ.
ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು. ಇದಲ್ಲದೆ, ಎಂ.ಎ. ಹಸನ್ ಅವರನ್ನು ಯುಡಿಎಫ್ ಕನ್ವೀನರ್ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ರಾಜ್ಯ ಸಮಿತಿಯ 24 ಮುಖಂಡರು ಪತ್ರಕ್ಕೆ ಸಹಿ ಹಾಕಿರುವರು. ಪಕ್ಷವನ್ನು ಮರುಸಂಘಟಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ಸ್ ಸಂಪೂರ್ಣ ನಶಿಸಲಿದೆ ಎಂದು ಯುವ ಕಾಂಗ್ರೆಸ್ ಪತ್ರದಲ್ಲಿ ತಿಳಿಸಿದೆ.
ಚುನಾವಣಾ ಫಲಿತಾಂಶ ಪ್ರಕಟಣೆವಾದ ಬಳಿಕ, ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆಯ ಬೇಡಿಕೆ ಹೆಚ್ಚುತ್ತಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಮಹತ್ವದ ಚರ್ಚೆಗಳನ್ನು ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಾಯಕತ್ವಕ್ಕೆ ಪತ್ರ ಸಲ್ಲಿಸಿರುವರು.






