ತಿರುವನಂತಪುರ: ಕೇರಳದಲ್ಲಿ ಪಡಿತರ ವ್ಯಾಪಾರಿಗಳಲ್ಲಿ ಕೊರೋನಾ ಹರಡುತ್ತಿದೆ. ಕೋವಿಡ್ ಎರಡನೇ ಅಲೆಗೆ ಈಗಾಗಲೇ 17 ಮಂದಿ ಪಡಿತರ ಉದ್ಯೋಗಿಗಳು ರಾಜ್ಯಾದ್ಯಂತ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರತಿದಿನವೂ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಪಡಿತರ ವ್ಯಾಪಾರಿಗಳು ಮತ್ತು ಮಾರಾಟಗಾರರನ್ನು ಕೋವಿಡ್ ಲಸಿಕೆಯ ಮೊದಲ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕೆಂಬ ಬೇಡಿಕೆ ರಾಜ್ಯಾದ್ಯಂತ ಬಲಗೊಳ್ಳುತ್ತಿದೆ.
ಕಳೆದ ಒಂದು ತಿಂಗಳಲ್ಲಿ 17 ಮಂದಿ ರೇಶನ್ ಉದ್ಯೋಗಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಮೂರು ಮತ್ತು ಕೊಟ್ಟಾಯಂ, ಎರ್ನಾಕುಳಂ, ತ್ರಿಶೂರ್ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ತಲಾ ಎರಡು ಮಂದಿ ಸಾವನ್ನಪ್ಪಿದ್ದಾರೆ. ವಯನಾಡ್, ಆಲಪ್ಪುಳ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೋಂಕಿಗೊಳಗಾಗಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 500 ಪಡಿತರ ಉದ್ಯೋಗಿಗಳು ಕೊರೋನಾ ಚಿಕಿತ್ಸೆಯಲ್ಲಿದ್ದಾರೆ.
ಕೇರಳದಲ್ಲಿ 10,000 ಕ್ಕೂ ಹೆಚ್ಚು ಪಡಿತರ ಅಂಗಡಿಗಳಿವೆ. 90 ಲಕ್ಷ ಪಡಿತರ ಗ್ರಾಹಕರಿದ್ದಾರೆ. ಪಡಿತರ ವ್ಯಾಪಾರಿಗಳು ಪ್ರತಿ ತಿಂಗಳು 20 ಮಿಲಿಯನ್ ಜನರನ್ನು ಸಂಪರ್ಕಿಸುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಕೂಡಾ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೊರೋನಾ ಲಸಿಕೆಗೆ ಆದ್ಯತೆ ನೀಡುವ ಅವಶ್ಯಕತೆಯಿದೆ ಎಂದು ಆಗ್ರಹಿಸಲಾಗಿದೆ.






