HEALTH TIPS

ಕೋವಿಡ್‌ ನಿರ್ವಹಣೆ: 'ಸುಪ್ರೀಂ' ಮಧ್ಯಪ್ರವೇಶ ಬೇಡ ಎಂದ ಕೇಂದ್ರ ಸರ್ಕಾರ

         ನವದೆಹಲಿ: ಕೋವಿಡ್‌-19ರ ನಿರ್ವಹಣೆಯ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಇರುವ ಅವಕಾಶ ಅತ್ಯಲ್ಪ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಕೋವಿಡ್‌ ಎಂಬುದು ಜಾಗತಿಕವಾದ ಪಿಡುಗು.ಇದನ್ನು ಎದುರಿಸುವ ಕಾರ್ಯತಂತ್ರ ವೈದ್ಯಕೀಯ ಪರಿಣತರು ಮತ್ತು ವೈಜ್ಞಾನಿಕ ಅಭಿಪ್ರಾಯಗಳನ್ನು ಆಧರಿಸಿದೆ ಎಂದು ತಿಳಿಸಿದೆ.


      ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಎತ್ತಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ಭಾನುವಾರ ರಾತ್ರಿ ಪ್ರಮಾಣಪತ್ರ ಸಲ್ಲಿಸಿದೆ. ಕೋವಿಡ್‌ ನಿರ್ವಹಣೆಗಾಗಿ 12 ಸದಸ್ಯರ ರಾಷ್ಟ್ರೀಯ ಕಾರ್ಯ‍ಪಡೆ ರಚಿಸಲು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಒಪ್ಪಿದ ಎರಡು ದಿನಗಳ ಬಳಿಕ ಈ ಪ್ರಮಾಣಪತ್ರ ಸಲ್ಲಿಸಲಾಗಿದೆ.

      ಆಮ್ಲಜನಕ ಮತ್ತು ಅಗತ್ಯ ಔಷಧ ಪೂರೈಕೆ ಸೇರಿದಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ನೆರವಾಗಲು ವೈದ್ಯಕೀಯ ಕ್ಷೇತ್ರದ ತಜ್ಞರ ಹೆಸರನ್ನೂ ಸೂಚಿಸಿತ್ತು.

        'ಒಳ್ಳೆಯ ಉದ್ದೇಶದ್ದೇ ಆದರೂ ಪರಿಣತರ ಸಲಹೆ ಅಥವಾ ಆಡಳಿತಾತ್ಮಕ ಅನುಭವ ಇಲ್ಲದ ನ್ಯಾಯಾಂಗದ ಅತ್ಯುತ್ಸಾಹದ ಮಧ್ಯಪ್ರವೇಶವು ಅನಿರೀಕ್ಷಿತ ಮತ್ತು ಉದ್ದೇಶಿತವಲ್ಲದ ಪರಿಣಾಮಗಳಿಗೆ ಕಾರಣ ಆಗಬಹುದು. ಇದು ವೈದ್ಯರು, ವಿಜ್ಞಾನಿಗಳು, ಪರಿಣತರು ಮತ್ತು ಕಾರ್ಯಾಂಗಕ್ಕೆ ನೂತನ ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶ ನಿರಾಕರಿಸುತ್ತದೆ' ಎಂದು ಕೇಂದ್ರ ಹೇಳಿದೆ.

ಸಾಂಕ್ರಾಮಿಕವು ದಿಢೀರ್‌ ಕಾಣಿಸಿಕೊಂಡಿತು. ಲಸಿಕೆಯ ಕೊರತೆ ಇದೆ. ಹಾಗಾಗಿ, ದೇಶದ ಎಲ್ಲರಿಗೂ ಒಂದೇ ಬಾರಿಗೆ ಲಸಿಕೆ ಹಾಕಿಸಲು ಸಾಧ್ಯವಿಲ್ಲ. ಯಾರಿಗೆ ಹೆಚ್ಚು ಅಪಾಯ ಇದೆಯೋ ಅವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

         ಈಗಿನ ಅಂದಾಜಿನ ಪ್ರಕಾರ ವೈದ್ಯಕೀಯ ಆಮ್ಲಜನಕದ ಬೇಡಿಕೆ ಎಷ್ಟಿದೆ ಮತ್ತು ಮುಂದಿನ ದಿನಗಳಲ್ಲಿ ಎಷ್ಟು ಬೇಕಾಗಬಹುದು, ತೀವ್ರವಾಗಿ ಬಾಧಿತವಾದ ರಾಜ್ಯಗಳಿಗೆ ಹೇಗೆ ಹಂಚಿಕೆ ಮಾಡಲಾಗುವುದು ಮತ್ತು ನಿಗಾ ವ್ಯವಸ್ಥೆ ಏನು ಎಂಬ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ ಕೇಳಿತ್ತು.

ಹಿಂದೆಂದೂ ಕಂಡಿಲ್ಲದ ರೀತಿಯ ಪಿಡುಗನ್ನು ಎದುರಿಸುವ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ನೀತಿಯನ್ನು ರೂಪಿಸುವ ವಿವೇಚನಾಧಿಕಾರ ಸರ್ಕಾರಕ್ಕೆ ಬೇಕು. ಇಂತಹ ಸಂದರ್ಭದಲ್ಲಿನ ಲಸಿಕೆ ಅಭಿಯಾನದ ನೀತಿಯನ್ನು ಕಾರ್ಯಾಂಗೀಯ ನೀತಿಯಾಗಿ ರೂಪಿಸಲಾಗಿದೆ. ಕಾರ್ಯಾಂಗದ ವಿವೇಕದ ಮೇಲೆ ಈಗ ನಂಬಿಕೆ ಇರಿಸಬೇಕು ಎಂದು ಪ್ರಮಾಣ‍ಪತ್ರವು ವಿವರಿಸಿದೆ.

ಲಸಿಕೆ ಭಿನ್ನ ದರಕ್ಕೆ ಸಮರ್ಥನೆ: ಕೋವಿಡ್‌ ತಡೆ ಲಸಿಕೆಗೆ ಭಿನ್ನ ದರ ನಿಗದಿಯನ್ನೂ ಸರ್ಕಾರವು ಸಮರ್ಥಿಸಿಕೊಂಡಿದೆ. ಖಾಸಗಿ ಸಂಸ್ಥೆಗಳು ಮತ್ತು ವಿದೇಶದ ಲಸಿಕೆ ತಯಾರಕರನ್ನು ದೇಶದಲ್ಲಿ ಲಸಿಕೆ ತಯಾರಿಸಲು ಆಕರ್ಷಿಸುವುದು ಮತ್ತು ಆ ಮೂಲಕ ಲಸಿಕೆ ಲಭ್ಯತೆ ಹೆಚ್ಚಿಸುವುದು ಇದರ ಉದ್ದೇಶ ಎಂದು ಹೇಳಿದೆ.

       ಲಸಿಕೆಯನ್ನು ಉಚಿತವಾಗಿಯೇ ಪಡೆಯುವ ಆಯ್ಕೆಯನ್ನು ಜನರ ಮುಂದೆ ಇರಿಸುವುದು ಸರ್ಕಾರದ ಕಾರ್ಯತಂತ್ರ. ಲಸಿಕೆ ಮಾರಾಟದಿಂದ ತಯಾರಕರು ಅಸಾಧಾರಣವಾದ ಲಾಭವನ್ನೂ ಮಾಡಿಕೊಂಡಿಲ್ಲ ಎಂದು 218 ಪುಟಗಳ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

        'ಎಲ್ಲರಿಗೂ ಉಚಿತವಾಗಿಯೇ ಲಸಿಕೆ ಹಾಕಿಸಲಾಗುವುದು ಎಂದು ಎಲ್ಲ ರಾಜ್ಯಗಳೂ ಘೋಷಿಸಿವೆ. ಹಾಗಾಗಿ, ಭಿನ್ನ ದರದಿಂದಾಗಿ ಫಲಾನುಭವಿಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ'‍ ಎಂದೂ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries