HEALTH TIPS

ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಯಾಸ್ ಚಂಡಮಾರುತ; ಮಧ್ಯರಾತ್ರಿ ವೇಳೆಗೆ ಜಾರ್ಖಂಡ್ ನತ್ತ ಪಯಣ

        ನವದೆಹಲಿಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ್ದ ಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಮ ಬಂಗಾಳಕ್ಕೆ ಅಪ್ಪಳಿಸಿದ್ದು, ಇಂದು ಮಧ್ಯರಾತ್ರಿ ಹೊತ್ತಿಗೆ ಜಾರ್ಖಂಡ್ ಕರಾವಳಿ ಪ್ರವೇಶ ಮಾಡುವ ಸಾಧ್ಯತೆ ಇದೆ.

     ಒಡಿಶಾದ ಭದ್ರಕ್‌ ಜಿಲ್ಲೆಯ ಧಾಮ್ರ ಬಂದರು ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ದಕ್ಷಿಣ 24 ಪರಗಣಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಿದ್ದು, ಪ್ರತಿ ಗಂಟೆಗೆ ಸುಮಾರು 130ರಿಂದ 155 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

        ಇಂದು ಬೆಳಗ್ಗೆ 9.15ಕ್ಕೆ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿ 41 ಗಂಟೆ ವೇಳೆಗೆ ಒಡಿಶಾದ ಬಾಲಾಸೋರ್‌ನಿಂದ 50 ಕಿಲೋ ಮೀಟರ್‌ ದೂರದಲ್ಲಿ ಈ ಚಂಡಮಾರುತ ಮೊದಲಿಗೆ ಅಪ್ಪಳಿಸಿದೆ. ಕರಾವಳಿಗೆ ಅಪ್ಪಳಿಸುವ ವೇಳೆ ಚಂಡಮಾರುತ ಪ್ರತೀ ಗಂಟೆಗೆ 150 ರಿಂದ 160 ಕಿಮೀವೇಗದಲ್ಲಿ ಬೀಸುತ್ತಿತ್ತು ಎಂದು ಹವಮಾನ ಇಲಾಖೆಯ ಡಿಜಿ ಮಹಾಪಾತ್ರ ಹೇಳಿದ್ದಾರೆ.

         ಚಂಡಮಾರುತದಿಂದಾಗಿ ಬಾಲಾಸೋರ್‌ ಮತ್ತು ಭದ್ರಕ್‌ ಜಿಲ್ಲೆಯಲ್ಲಿ ಅಪಾರ ಪರಿಣಾಮ ಬೀರಿದೆ. ಚಂಡಮಾರುತ ಪ್ರತಿ ಗಂಟೆಗೆ 155-165 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದ್ದು, ಕ್ರಮೇಣ ಈ ವೇಗ ಪ್ರತಿ ಗಂಟೆಗೆ 165 ಕಿಲೋ ಮೀಟರ್‌ ಬದಲು 130ರಿಂದ 140 ಕಿಲೋ ಮೀಟರ್‌ ವೇಗಕ್ಕೆ ಕುಸಿಯಲಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ.

                  ಅಪ್ಪಳಿಸುವ ವೇಳೆ ಚಂಡಮಾರುತದ ವೇಗ ಕುಸಿತ
          ಈ ಹಿಂದೆ ಚಂಡಮಾರುತ ಕರಾವಳಿಗೆ ಅಪ್ಪಳಿಸುವ ವೇಗ ಗಂಟೆಗೆ 155-165 ಕಿಲೋ ಮೀಟರ್‌ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕರಾವಳಿಗೆ ಅಪ್ಪಳಿಸುವ ವೇಳೆ ಚಂಡಮಾರುತ ಪ್ರತೀ ಗಂಟೆಗೆ 130ರಿಂದ 145 ಕಿಲೋ ಮೀಟರ್‌ ವೇಗದಲ್ಲಿ ಬಂದು ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

         ಚಂಡಮಾರುತ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು, ಮರಗಳು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಆದರೆ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿಯ ಕುರಿತು ಈ ವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಕರಾವಳಿ ಪ್ರದೇಶದ ಸುಮಾರು 5.80ಲಕ್ಷ ಜನರನ್ನು ಸುರಕ್ಷಿತ ಸ್ಥಳಾಂತರಿಸಲಾಗಿದೆ. ಚಂಡಮಾರುತ ಪರಿಣಾಮದಿಂದಾಗಿ ಭದ್ರಕ್‌ ಜಿಲ್ಲೆಯಲ್ಲಿ 273 ಮಿಲಿಮೀಟರ್‌ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ ಇದಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು 52 ಎನ್‌ಡಿಆರ್‌ಎಫ್‌ ಸೇರಿದಂತೆ 404 ತಂಡಗಳನ್ನು ನಿಯೋಜಿಸಲಾಗಿದೆ.

                  ದಾಖಲೆ ಮಳೆಗೆ ಸಾಕ್ಷಿಯಾದ ಒಡಿಶಾ
       ಚಂಡಮಾರುತದಿಂದಾಗಿ ಒಡಿಶಾದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗಿದೆ ಎಂದು ಭುವನೇಶ್ವರ ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಉಮಾಶಂಕರ್ ಡ್ಯಾಶ್ ಹೇಳಿದ್ದಾರೆ. ಭದ್ರಾಕ್ ಜಿಲ್ಲೆಯ ಚಾಂದಬಾಲಿಯಲ್ಲಿ 27.3 ಸೆಂ.ಮೀ ಮಳೆಯಾಗಿದ್ದು, ಇದು ರಾಜ್ಯದಲ್ಲಿ 24 ಗಂಟೆಗಳಲ್ಲಿ ಬಿದ್ದ ಅತಿ ಹೆಚ್ಚಿನ ಮಳೆ ಪ್ರಮಾಣವಾಗಿದೆ, ಉಳಿದಂತೆ ಪ್ಯಾರದೀಪ್ ನಲ್ಲಿ 19.7 ಸೆಂ, ಬಾಲಸೋರ್ 5.1 ಸೆಂ ಮತ್ತು ಭುವನೇಶ್ವರ 4.9 ಸೆಂ ಮಳೆಯಾಗಿದೆ. ಕರಾವಳಿಯಲ್ಲಿ ಮಳೆ ಉಲ್ಬಣ ಮತ್ತು ಚಂಡಮಾರುತದ ರಭಸಕ್ಕೆ ಭದ್ರಾಕ್ ಜಿಲ್ಲೆಯ ಮೋಹನ್‌ಪುರ ಕರಾವಳಿ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 9 ಕಿ.ಮೀ ಒಳಗೆ ನುಗ್ಗಿದೆ. ಪರಿಣಾಮ ಇಲ್ಲಿನ ಜನವಸತಿ ಪ್ರದೇಶಗಳು ಮುಳುಗಡೆಯಾಗಿವೆ.

                      ಪಶ್ಚಿಮ ಬಂಗಾಳದಲ್ಲಿ ಯಾಸ್ ಅಬ್ಬರ
       ಇನ್ನು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೂ ಚಂಡಮಾರುತ ಅಪ್ಪಳಿಸಿದ್ದು, ಪೂರ್ವ ಮಿಡ್ನಾಪುರ ಮತ್ತು ದಕ್ಷಿಣ 24 ಪರಗಣದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಪೂರ್ವ ಮಿಡ್ನಾಪುರದಲ್ಲಿ ಹಲವು ಒಡ್ಡುಗಳು ಒಡೆದುಹೋಗಿವೆ. ಪೂರ್ವ ಮಿಡ್ನಾಪುರದ ದಿಘಾಪುರದಲ್ಲಿ ಪ್ರತಿ ಗಂಟೆಗೆ 90 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಕೋಲ್ಕತ್ತದಲ್ಲೂ ಪ್ರತಿ ಗಂಟೆಗೆ 62 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ದಕ್ಷಿಣ ಬಂಗಾಳದ ಪ್ರದೇಶಗಳಲ್ಲೂ ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ಬಂಗಳಾದಲ್ಲಿ ಚಂಡಮಾರುತದ ಬಳಿಕ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಸಾವಿಗೀಡಾಗಿದ್ದು, 80 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            ಬಹುತೇಕ ಪಶ್ಚಿಮ ಬಂಗಾಳವು ಪ್ರವಾಹಕ್ಕೆ ಸಿಲುಕಿದೆ: ಸಿಎಂ ಮಮತಾ ಬ್ಯಾನರ್ಜಿ
       ಚಂಡಮಾರುತದಿಂದಾಗಿ ಬಹುತೇಕ ಪಶ್ಚಿಮ ಬಂಗಾಳವು ಪ್ರವಾಹ ಪರಿಸ್ಥಿತಿಗೆ ಸಿಲುಕಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಪ್ರಮುಖವಾಗಿ ಪುರ್ಬಾ ಮದಿನಿಪುರ, ದಕ್ಷಿಣ 24 ಪರಗಣ, ಉತ್ತರ 24 ಪರಗಣ, ಹೌರಾ, ಹೂಗ್ಲಿ, ಪುರುಲಿಯಾ ಮತ್ತು ನೈಡಾ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ. ಕರಾವಳಿ ಪ್ರದೇಶಗಳಿಗೆ ಸಮುದ್ರದ ನೀರು ಪ್ರವೇಶಿಸಿದ್ದು, ತಗ್ಗು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ರಾಜಧಾನಿ ಕೋಲ್ಕತ್ತಾದಲ್ಲಿ ಹೆಚ್ಚಿನ ಹಾನಿಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮೇಲ್ಸೇತುವೆಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.

                    ಬಂಗಾಳದಲ್ಲೂ ವ್ಯಾಪಕ ಮಳೆ
       ಚಂಡಮಾರುತದ ಪರಿಣಾಮದಿಂದಾಗಿ ಬಂಗಾಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಂಗಾಳದ ಕರಾವಳಿ ಪ್ರದೇಶಗಳಾದ ದಿಘಾದಲ್ಲಿ 5.5 ಸೆಂ.ಮೀ ಮಳೆ, ಡೈಮಂಡ್ ಹಾರ್ಬರ್‌ನಲ್ಲಿ 3.3 ಸೆಂ.ಮೀ ಮಳೆ, ಹಲ್ಡಿಯಾ 3.2 ಸೆಂ.ಮೀ ಮಳೆಯಾಗಿದೆ. ಅಂತೆಯೇ ಕೋಲ್ಕತ್ತಾದಲ್ಲಿ 2.24 ಸೆಂ.ಮೀ ಮಳೆಯಾಗಿದ್ದು, ಸಾಲ್ಟ್ ಲೇಕ್‌ನಲ್ಲಿ 3.05 ಸೆಂ.ಮೀ, ಕಾಂಟೈನಲ್ಲಿ 5.42 ಸೆಂ.ಮೀ ಮಳೆ ಮತ್ತು ಕಲೈಕುಂಡದಲ್ಲಿ 2.2 ಸೆಂ.ಮೀ ಮಳೆಯಾಗಿದೆ. ಚಂಡಮಾರುತ ನಿರ್ವಹಣೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಕನಿಷ್ಠ 2 ಲಕ್ಷ ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬ್ಯಾನರ್ಜಿ ಹೇಳಿದರು.

              ಗುರುವಾರದವರೆಗೂ ಸಮುದ್ರ ಶಾಂತವಾಗುವುದಿಲ್ಲ
       ಚಂಡಮಾರುತದ ಎಫೆಕ್ಟ್ ಗುರುವಾರದವರೆಗೂ ಇರಲಿದ್ದು,. ಸಮುದ್ರದಲ್ಲಿ ಅಲೆಗಳ ಆರ್ಭಟ ಮುಂದುವರೆಯಲಿದೆ. ಇದರ ಜೊತೆ ಭಾರಿ ಮಳೆ ಕೂಡ ಆಗಲಿದೆ. ಸಂಜೆ ವೇಳೆಗೆ ಗಾಳಿ ಮತ್ತು ಮಳೆ ತಗ್ಗಲಿದೆ ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries