ವಾಷಿಂಗ್ಟನ್: 'ಅಮೆರಿಕದ ಸಹಾಯದೊಂದಿಗೆ ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದರು.
'ಅಮೆರಿಕದ ಹೊಸ ಸರ್ಕಾರ ಮತ್ತು ಸಂಪುಟದ ಸದಸ್ಯರೊಂದಿಗೆ ಸಂಬಂಧವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಪ್ರಮುಖ ಗುರಿಯಾಗಿತ್ತು. ಈ ಭೇಟಿ ವೇಳೆ ನಾನು ನಾಯಕರೊಂದಿಗೆ ಕೋವಿಡ್ ಲಸಿಕೆಯ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ಮಾಡಿದ್ದೇನೆ' ಎಂದು ಅವರು ಭಾರತೀಯ ವರದಿಗಾರರಿಗೆ ತಿಳಿಸಿದರು.
'ಕೋವಿಡ್‌ನ ಎರಡನೇ ಅಲೆಯ ವೇಳೆ ಅಮೆರಿಕವು ಭಾರತದೊಂದಿಗೆ ನಿಂತಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದೇ ಈ ಪ್ರವಾಸದ ಮೂಲ ಉದ್ದೇಶ. ಭಾರತದಲ್ಲಿ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಸರ್ಕಾರ ಅಮೆರಿಕದೊಂದಿಗೆ ಕೆಲಸ ಮಾಡುತ್ತಿದೆ' ಎಂದು ಅವರು ಮಾಹಿತಿ ನೀಡಿದರು.
ಭಾರತಕ್ಕೆ ಅಮೆರಿಕದಿಂದ ಲಸಿಕೆ ಪೂರೈಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್ ಅವರು,'ಲಸಿಕೆಗೆ ಸಂಬಂಧಿಸಿದಂತೆ ಕಾನೂನು, ವಾಣಿಜ್ಯ ಸೇರಿದಂತೆ ಇತರೆ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಹಲವು ಕಂಪನಿಗಳು ಇದಕ್ಕೆ ಮುಂದೆ ಬಂದಿವೆ' ಎಂದರು.
'ಈ ಬಗ್ಗೆ ನಾನು ಲಂಡನ್‌ನಲ್ಲಿರುವಾಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜತೆ ಚರ್ಚಿಸಿದ್ದೇನೆ. ಕಳೆದ ಎರಡು-ಮೂರು ವಾರಗಳಲ್ಲಿ ಲಸಿಕೆ ಪೂರೈಕೆ ಸರಪಳಿ ಸರಾಗವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಗಮನಿಸಬಹುದು. ಇದರಲ್ಲಿ ಅಮೆರಿಕದಲ್ಲಿರುವ ಭಾರತದ ರಾಯಭಾರಿಯ ಪಾತ್ರ ಮಹತ್ವದಾಗಿದೆ' ಎಂದು ಅವರು ತಿಳಿಸಿದರು.
ಈ ಅಮೆರಿಕ ಪ್ರವಾಸ ವೇಳೆ ಜೈಶಂಕರ್ ಅವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲಿವನ್, ವಾಣಿಜ್ಯ ವ್ಯವಹಾರಗಳ ಪ್ರತಿನಿಧಿ ಕ್ಯಾಥರಿನ್ ಥಾಯ್ ಅವರನ್ನು ಭೇಟಿಯಾದರು.





