ಕುಂಬಳೆ: ರಾಜಕೀಯೇತರ ಸೇವಾ ಸಂಘಟನೆಯಾದ ಸ್ಪಂದನ ಕುಂಬಳೆ ವತಿಯಿಂದ ಭಾನುವಾರ ಕುಂಬಳೆ ಪೇಟೆ ಪರಿಸರದಲ್ಲಿ ಸ್ವಯಂಸೇವಕರಿಂದ ಸ್ವಚ್ಚತಾ ಶ್ರಮದಾನ ನಡೆಯಿತು.
ಕುಂಬಳೆ ಪೇಟೆಯ ಸುತ್ತಮುತ್ತ ಹಮ್ಮಿಕೊಳ್ಳಲಾಗಿದ್ದ ಶ್ರಮದಾನವನ್ನು ಕುಂಬಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಅರೊಗ್ಯಾಧಿಕಾರಿ ಡಾ. ದಿವಾಕರ್ ರೈ ಚಾಲನೆ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಕೋವಿಡ್ ಮತ್ತು ಡೆಂಗ್ಯೂ ಜ್ವರ ಗಳನ್ನು ತಡೆಗಟ್ಟುವಲ್ಲಿ ಜನರ ಸಹಭಾಗಿತ್ವ ಮಹತ್ತರವಾದುದಾಗಿದೆ. ಸೇವಾ ಸಂಘಟನೆಗಳ ಮೂಲಕ ಸ್ವಚ್ಚತಾ ಅಭಿಯಾನ, ಆರೋಗ್ಯ ಜಾಗೃತಿಗಳು ಬಲಗೊಂಡಷ್ಟು ಸಮಾಜದ ಆರೋಗ್ಯಪೂರ್ಣ ಸುಸ್ಥಿರತೆಗೆ ಅಮೋಘ ಕೊಡುಗೆ ನೀಡಿದಂತಾಗುತ್ತದೆ ಎಂದವರು ತಿಳಿಸಿದರು. ವ್ಯಾಪಾರಿಗಳ ಸಹಿತ ಎಲ್ಲರೂ ಸ್ವಚ್ಚತೆಗೆ ಪೂರ್ಣ ಪ್ರಮಾಣದ ಬೆಂಬಲ ನೀಡುವ ಸಂದರ್ಭ ಈಗಿನದು ಎಂದು ಅವರು ತಿಳಿಸಿದರು.
ಕುಂಬಳೆ ಪೋಲೀಸ್ ಠಾಣೆಯ ಉಪನಿರೀಕ್ಷಕ ರಾಜೀವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪಂದನ ಕುಂಬಳೆ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಸ್ಪಂದನ ಸಂಘಟನೆಯ ರೂವಾರಿಗಳಾದ ನ್ಯಾಯವಾದಿ ಉದಯಕುಮಾರ್ ಗಟ್ಟಿ ಸ್ವಾಗತಿಸಿ, ಲಕ್ಷ್ಮಣ್ ಪ್ರಭು ಕುಂಬಳೆ ವಂದಿಸಿದರು. ಸ್ಪಂದನದ ಸ್ವಯಂಸೇವಕರು, ಹಿತೈಷಿಗಳು ಶ್ರಮಾಧಾನದಲ್ಲಿ ಭಾಗವಹಿಸಿದರು. ಚಿರಂಜೀವಿ ಕುಂಬಳೆ ಇದರ ಸದಸ್ಯರು ಶ್ರಮಾದಾನಕ್ಕೆ ಕೈಜೋಡಿಸಿದ್ದರು. ಕುಂಬಳೆ ಪೇಟೆ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.





