ಕಾಸರಗೋಡು: 2020-21ನೇ ವರ್ಷದ ನ್ಯಾಷನಲ್ ಕ್ವಾಲಿಟಿ ಅಷೂರೆನ್ಸ್ ಸ್ಟಾಂಡರ್ಡ್ ( ಎನ್.ಕ್ಯೂ. ಎ.ಎಸ್.) ಪ್ರಶಸ್ತಿಯ ಶೇ 100 ಅಂಕಗಳಲ್ಲಿ ಶೇ 99 ಅಂಕ ಗಳಿಸುವ ಮೂಲಕ ಕಾಸರಗೋಡು ಜಿಲ್ಲೆಯ ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನ ಕಯ್ಯೂರು ರಕ್ತಸಾಕ್ಷಿ ಸ್ಮಾರಕ ಕುಟುಂಬ ಆರೋಗ್ಯ ಕೇಂದ್ರ ಎರಡನೇ ಬಾರಿಯೂ ರಾಷ್ಟ್ರೀಯ ಮಟ್ಟದ ಅಂಗೀಕಾರಕ್ಕೆ ಭಾಜನವಾಗಿದೆ.
ಸಂಸ್ಥೆಗಳ ಸಂಬಂಧ ವಿವಿಧ ವಲಯಗಳ ಮೂಲಕ ನಡೆಸಲಾಗುವ ಪರಿಶೀಲನೆ, ನಿಗಾಗಳ ಹಿನ್ನೆಲೆಯಲ್ಲಿ ಈ ಸ್ಕೋರ್ ನೀಡಲಾಗುತ್ತದೆ. ರೋಗಿಗಳ ಶುಶ್ರೂಷೆ, ಪ್ರಯೋಗಾಲಯ ಸೇವೆ, ಸಾರ್ವಜನಿಕ ಆರೋಗ್ಯ ಸಂರಕ್ಷಣೆಯಲ್ಲಿ ಸಕ್ರಿಯತೆ, ಆಡಳಿತೆ ನಿರ್ವಹಣೆ ಇತ್ಯಾದಿ ಹಂತಗಳಲ್ಲಿ ನಡೆಸಲಾಗುವ ಸೂಕ್ಷ್ಮ ಪರಿಶೀಲನೆಯಲ್ಲಿ ಈ ಅಂಕ ಲಭಿಸುತ್ತದೆ.
ಈ ನಿಟ್ಟಿನಲ್ಲಿ ಇಡೀ ದೇಶದ ಅತ್ಯುತ್ತಮ ಎನಿಸಿರುವ 12 ಸಂಸ್ಥೆಗಳೂ ಕೇರಳ ರಾಜ್ಯದವೇ ಆಗಿವೆ ಎಂಬುದು ಗಮನಾರ್ಹ. ಇವುಗಳಲ್ಲಿ ಶೇ 99 ಅಂಕ ಪಡೆದಿರುವ ಕಾಸರಗೋಡು ಜಿಲ್ಲೆಯ ಕಯ್ಯೂರು ಕುಟುಂಬ ಆರೋಗ್ಯ ಮೊದಲ ಸ್ಥಾನಲ್ಲಿದೆ. ಈ ಮೂಲಕ ವಿಜೇತರಾದ ಸಂಸ್ಥೆಗಳಿಗೆ ಆಯಾ ವರ್ಷ ಸಂಸ್ಥೆಯ ಅಭಿವೃದ್ಧಿಗಾಗಿ 2 ಲಕ್ಷ ರೂ. ಸರಕಾರ ಮಂಜೂರು ಮಾಡುತ್ತದೆ.
ಗ್ರಾಮ ಪಂಚಾಯತ್ ನ ವಾರ್ಷಿಕ ಯೋಜನೆಗಳಲ್ಲಿ ಆರೋಗ್ಯ ವಲಯದಲ್ಲಿ ನೂತನವಾಗಿರುವ ವಿವಿಧ ಯೋಜನೆಗಳನ್ನು ರಚಿಸಿ ಜಾರಿಗೊಳಿಸುವ ನಿಟ್ಟಿನಲ್ಲೂ ಈ ಮನ್ನಣೆ ಸಲ್ಲುತ್ತದೆ. ಈ ಸಾಧನೆಯನ್ನು ಮುಂದಿನ ವರ್ಷಗಳಲ್ಲೂ ಮುಂದುವಿರಿಸಲಾಗುವುದು ಎಂದು ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಪಿ.ವತ್ಸಲನ್ ತಿಳಿಸಿದರು.


