ತಿರುವನಂತಪುರಂ: ಕೇರಳದ 15ನೇ ವಿಧಾನಸಭೆಯ ಪ್ರಥಮ ಅಧಿವೇಶನ ಸೋಮವಾರ ಆರಂಭವಾಗಲಿದೆ. ಕೇರಳದ ನಾಲ್ಕು ದಶಕಗಳ ಇತಿಹಾಸದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಹೀಗಾಗಿ ಈ ಅಧಿವೇಶನಕ್ಕೆ ವಿಶೇಷ ಮಹತ್ವ ದೊರೆತಿದೆ.
ಮುಖ್ಯಮಂತ್ರಿ ಜೊತೆಗೆ ಸಚಿವರು ಆಗಿರುವ ಅವರ ಅಳಿಯ ಪಿ.ಎ.ಮೊಹಮ್ಮದ್ ರಿಯಾಸ್ ಅವರು ಒಟ್ಟಿಗೇ ಅಧಿವೇಶದದಲ್ಲಿ ಕಾಣಿಸಿಕೊಳ್ಳುವುದು ಹಾಗೂ ಮೂವರು ಮಹಿಳಾ ಸಚಿವರಿರುವುದು 15ನೇ ವಿಧಾನಸಭೆಯ ಮತ್ತೊಂದು ವಿಶೇಷ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ರಮೇಶ್ ಚೆನ್ನಿತ್ತಲ ತೆರವುಗೊಳ್ಳುತ್ತಿರುವುದೂ ಕುತೂಹಲ ಮೂಡಿಸಿದೆ.
ಮೊದಲ ದಿನ ನೂತನ ಶಾಸಕರು ಪ್ರಮಾಣ ಸ್ವೀಕರಿಸಲಿದ್ದು, ಹಂಗಾಮಿ ಸ್ಪೀಕರ್ ಆಗಿ ಶಾಸಕ ಪಿ.ಟಿ.ಎ ರಹೀಂ ಆಯ್ಕೆಯಾಗಿದ್ದಾರೆ. ನೂತನ ಸ್ಪೀಕರ್ ಆಯ್ಕೆಗೆ 25ರಂದು ಚುನಾವಣೆ ನಡೆಯಲಿದೆ. ಆಡಳಿತರೂಡ ಎಲ್‌ಡಿಎಫ್ ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ತ್ರಿಥಲಾ ಕ್ಷೇತ್ರದ ಶಾಸಕ ಎಂ.ಬಿ.ರಾಜೇಶ್ ಅವರನ್ನು ಹೆಸರಿಸಿದ್ದರೆ, ವಿರೋಧಪಕ್ಷವಾಗಿರುವ ಕಾಂಗ್ರೆಸ್ ವಿ.ಡಿ.ಸತೀಶ್ ಅವರನ್ನು ಹಲವಾರು ಗೊಂದಲಗಳ ಬಳಿಕ ಪ್ರತಿಪಕ್ಷ ನಾಯಕನಾಗಿ ಶನಿವಾರ ಘೋಷಿಸಿದೆ.
ವಿರೋಧಪಕ್ಷದ ಕಡೆಯು ಸಾಕಷ್ಟು ಬದಲಾವಣೆಯಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ ಬದಲಿಗೆ ವಿ.ಡಿ.ಸತೀಶನ್ ಮುನ್ನಡೆಸುವರು. 14ನೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮತ್ತು ವಿರೋಧಪಕ್ಷದ ನಾಯಕ ಚೆನ್ನಿತ್ತಲ ನಡುವೆ ವಿವಿಧ ವಿಷಯಗಳಲ್ಲಿ ವಾಗ್ವಾದ ಸಾಮಾನ್ಯವಾಗಿತ್ತು.





