ತಿರುವನಂತಪುರ: ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆ ಕೇವಲ ಮಾತಿಗಷ್ಟೇ ಸೀಮಿತವಾಯಿತು. ಆಹ್ವಾನಿತ ಅತಿಥಿಗಳಿಗಿರುವ ಕುರ್ಚಿಗಳಲ್ಲಿ ಸಾಮಾಜಿಕ ಅಂತರವನ್ನು ಖಾತ್ರಿಪಡಿಸಲಾಗಿದ್ದರೂ, ಡೇರೆಯ ಬದಿಗಳಲ್ಲಿ ಅಧಿಕಾರಿಗಳು ಸೇರಿದಂತೆ ಜನಸಂದಣಿ ಇತ್ತು.
ಸಾಮಾಜಿಕ ದೂರವನ್ನು ಖಾತರಿಪಡಿಸುವ ಮೂಲಕ ಪ್ರಮಾಣವಚನ ಸಮಾರಂಭವನ್ನು ಕಠಿಣ ನಿಬಂಧನೆಗಳ ಅಡಿಯಲ್ಲಿ ನಡೆಸಲಾಗುವುದು ಎಂದು ಪಿಣರಾಯಿ ವಿಜಯನ್ ಭರವಸೆ ನೀಡಿದ್ದರು. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಕಂಡುಬಂದಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರೊಂದಿಗೆ ಹಸ್ತಲಾಘವ ನೀಡಿ ಬಳಿಕ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆಗೆ ತೆರಳಿದ್ದರು. ಕೊರೋನಾ ಹರಡುವ ಸಂದರ್ಭದಲ್ಲಿ, ಹಸ್ತಲಾಘವ ಸೇರಿದಂತೆ ಸಂಪರ್ಕ ಸಂಬಂಧಿ ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಆರೋಗ್ಯ ಇಲಾಖೆಯ ಕಟ್ಟಪ್ಪಣೆಯ ಮಧ್ಯೆ ಸ್ವತಃ ಮುಖ್ಯಮಂತ್ರಿಗಳೇ ಇದನ್ನು ಉಲ್ಲಂಘಿಸಿರುವುದು ತಪ್ಪು ಸಂದೇಶಗಳಿಗೆ ಕಾರಣವಾಗಲಿದೆ.
ಪ್ರಮಾಣವಚನ ಸಮಾರಂಭದ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಅಲಪ್ಪುಳದಲ್ಲಿರುವ ವಯಲಾರ್ ಹುತಾತ್ಮರ ಸಭಾಂಗಣ, ಪುನ್ನಪ್ರದÀ ವಲಿಯ ಚುಡುಕತ್‍ನಲ್ಲಿರುವ ಹುತಾತ್ಮರ ಸಭಾಂಗಣಗಳಲ್ಲಿ ಎಡರಂಗ ಹಮ್ಮಿಕೊಂಡಿದ್ದ ಮಾಲಾರ್ಪಣೆ ಸಮಾರಂಭದಲ್ಲಿ ಕೊರೋನಾ ನಿಬಂಧನೆಗಳನ್ನು ಎಳ್ಳಷ್ಟೂ ಅನುಸರಿಸಿರಲಿಲ್ಲ. ನೇಮಕಗೊಂಡ ಸಚಿವರೊಂದಿಗೆ ಮುಖ್ಯಮಂತ್ರಿ ಈ ಸ್ಥಳಗಳಿಗೆ ತೆರಳಿದ್ದರು. ಪಕ್ಷದ ಮುಖಂಡರು ಮತ್ತು ಅನುಯಾಯಿಗಳ ಗುಂಪು ಜೊತೆಗಿತ್ತು. ಪ್ರಮಾಣವಚನ ಸಮಾರಂಭದಲ್ಲೂ ಕೊರೋನಾ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುವಲ್ಲಿ ವಿಫಲವಾಗಿದೆ.
ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೆ ವಿಜಯೋತ್ಸವ ಆಚರಿಸಿದ ಎಡರಂಗ ಎಕೆಜಿ ಕೇಂದ್ರದಲ್ಲಿ ಕೇಕ್ ಕತ್ತರಿಸಿದೆ ಎಂಬ ವಿವಾದವೂ ಈಗಾಗಲೇ ಕೇಳಿಬಂದಿದೆ. ಹೆಚ್ಚಿನ ಕೊರೋನಾ ವಿಸ್ತರಣೆಯಿಂದಾಗಿ ಇಂದು ತಿರುವನಂತಪುರ ಜಿಲ್ಲೆಯಲ್ಲಿ ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿದೆ. ಈ ಮಧ್ಯೆ, ಸರ್ಕಾರ ಅಧಿಕಾರಕ್ಕೆ ಬಂದ ಹೆಸರಿನಲ್ಲಿ ಸರಣಿ ಉಲ್ಲಂಘನೆಗಳು ನಡೆದಿವೆ. ಲಾಕ್ ಡೌನ್ ಕಾರಣ ಪೋಲೀಸ್ ಕ್ರಮವನ್ನು ಎದುರಿಸುತ್ತಿರುವ ಜನಸಾಮಾನ್ಯರಿಗೆ ಒಂದು ಕಾನೂನಾದರೆ, ರಾಜಕೀಯ ಮುಖಂಡರಿಗೆ ಮತ್ತೊಂದು ಎಂಬ ಆರೋಪಗಳು ಹೆಚ್ಚುತ್ತಿವೆ.





