HEALTH TIPS

ಆಕಾಶ ನೋಡಲು ರೆಡಿಯಾಗಿ: ಸೂಪರ್‌ಮೂನ್, ರೆಡ್‌ಮೂನ್, ಚಂದ್ರಗ್ರಹಣ ಎಲ್ಲಾ ಒಂದೇ ದಿನ

          ನವದೆಹಲಿ: ಜಗತ್ತಿನಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ರಂದು ನಡೆಯಲಿದೆ. ವಿಶೇಷ ಎಂದರೆ ಇದೇ ದಿನ ಸೂಪರ್ ಮೂನ್ ಮತ್ತು ರೆಡ್ ಬ್ಲಡ್ ಮೂನ್ ಕೂಡ ಗೋಚರಿಸಲಿದೆ. ಈ ಚಂದ್ರ ಗ್ರಹಣವು 5 ಗಂಟೆಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದ್ದು, 15 ನಿಮಿಷ ಪೂರ್ಣಗ್ರಹಣ ನಡೆಯಲಿದೆ. 2019ರಲ್ಲಿ ಇದೇ ರೀತಿಯ ಪೂರ್ಣ ಚಂದ್ರಗ್ರಹಣ ನಡೆದಿತ್ತು.

          ಇಂದು  ಭೂಮಿಗೆ ಸಮೀಪದಲ್ಲೇ ಅಂದರೆ ಅಂದಾಜು 28,000 ಮೈಲಿ ಸಮೀಪ ಚಂದ್ರನ ಕಕ್ಷೆ ಇರುವ ಕಾರಣ ಪೂರ್ಣ ಚಂದ್ರ ಸೂಪರ್ ಮೂನ್ ಆಗಿ ಗೋಚರಿಸುತ್ತಾನೆ. ಸೂಪರ್ ಮೂನ್ ಎಂದರೆ ಹುಣ್ಣಿಮೆ ದಿನ ಗೋಚರಿಸುವ ಸಾಮಾನ್ಯ ಚಂದ್ರನ ಗಾತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳುವುದು.

       ಭೂಮಿಯ ವಿರುದ್ಧ ಬದಿಗಳಲ್ಲಿ ಸೂರ್ಯ ಮತ್ತು ಚಂದ್ರರು ಇರುವಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣ ಬಿದ್ದಾಗ ಕತ್ತಲಾವರಿಸುವುದಿಲ್ಲ. ಬದಲಾಗಿ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಚಂದ್ರನನ್ನು ರೆಡ್ ಬ್ಲಡ್ ಮೂನ್ ಎನ್ನುತ್ತಾರೆ.

       ಪೆಸಿಫಿಕ್ ಸಾಗರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿ, ಅಮೆರಿಕದ ಪಶ್ಚಿಮ ಕರಾವಳಿಯವರಿಗೆ ಚಂದ್ರಗ್ರಹಣ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಕಾಣಿಸಲಿದೆ. ಭಾರತದಲ್ಲಿ ಪೂರ್ಣ ಚಂದ್ರ ಗ್ರಹಣ ಗೋಚರಿಸುವುದಿಲ್ಲ. ಇಲ್ಲಿ ಭಾಗಶಃ ಚಂದ್ರಗ್ರಹಣ ಕೆಲವು ಭಾಗಗಳಲ್ಲಿ ಮಾತ್ರ ಕಾಣಲಿದೆ. ವಿಶೇಷವಾಗಿ ಪೂರ್ವ ಭಾರತದ ಭಾಗಗಳಲ್ಲಿ, ನೇಪಾಳದ ಭಾಗದಲ್ಲಿ ಭಾಗಶಃ ಚಂದ್ರಗ್ರಹಣ ಕಾಣಲಿದೆ. ಇದು ಬಿಟ್ಟರೆ, ಜಾಗತಿಕವಾಗಿ ನೇಪಾಳ, ಪಶ್ಚಿಮ ಚೀನಾ, ಮಂಗೋಲಿಯಾ, ಪೂರ್ವ ರಷ್ಯಾದಲ್ಲಿ ಭಾಗಶಃ ಚಂದ್ರ ಗ್ರಹಣ ಗೋಚರವಾಗಲಿದೆ. ಭಾರತದಲ್ಲಿ ಭಾಗಶಃ ಚಂದ್ರ ಗ್ರಹಣ ಅಪರಾಹ್ನ 3.15ರಿಂದ ಸಂಜೆ 6.23ರ ತನಕ ಗೋಚರಿಸಲಿದೆ. ಭಾರತೀಯ ಕಾಲಮಾನ ಪ್ರಕಾರ, ಪೂರ್ಣಗ್ರಹಣ ಸಂಜೆ 4.39ರಿಂದ ಶುರುವಾಗಿ ಸಂಜೆ 4.58ಕ್ಕೆ ಕೊನೆಯಗೊಳ್ಳಲಿದೆ. ಪೋರ್ಟ್ ಬ್ಲೇರ್‌ನಲ್ಲಿ ಸಂಜೆ 5.38ರಿಂದ 45 ನಿಮಿಷ ಕಾಲ, ಪಶ್ಚಿಮ ಬಂಗಾಳದ ಮಾಲ್ಡಾ, ಒಡಿಶಾದ ಪುರಿಯಲ್ಲಿ ಸಂಜೆ 6.21ರ ಹೊತ್ತಿಗೆ 2 ನಿಮಿಷ ಚಂದ್ರ ಗ್ರಹಣ ಗೋಚರವಾಗಲಿದೆ.

        ಭಾರತದಲ್ಲಿ ಪೂರ್ಣ ಚಂದ್ರ ಗ್ರಹಣ ವೀಕ್ಷಣೆಗೆ ಸಿಗದೇ ಹೋದರೂ, ಭಾರತೀಯರು ಈ ವಿದ್ಯಮಾನವನ್ನು ವಿವಿಧ ಯೂಟ್ಯೂಬ್ ಚಾನೆಲ್‌ಗಳ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನ ಅಪರಾಹ್ನ 2.17ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದೆ. ರಾತ್ರಿ 7.19ರ ತನಕ ವೀಕ್ಷಣೆಗೆ ಸಿಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries