HEALTH TIPS

ಇನ್ನಿಲ್ಲ ಜನಸಂಖ್ಯಾ ಸ್ಫೋಟ; ಶುರುವಾಗಲಿದೆ ಜನಸಂಖ್ಯಾ ಕುಸಿತ? ಜಾಗತಿಕ ಮಟ್ಟದಲ್ಲಿ ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ವಿವರ

           ಇಡೀ ವಿಶ್ವದಲ್ಲಿ ಜನಸಂಖ್ಯಾ ಸ್ಪೋಟದ ಪರಿಕಲ್ಪನೆಗೆ ವಿರುದ್ಧವಾಗಿ ಜನಸಂಖ್ಯೆಯ ಕುಸಿತದ ಟ್ರೆಂಡ್ ಶುರುವಾಗಿದೆ. ವಿಶ್ವದ ಪ್ರಮುಖ ದೇಶಗಳಲ್ಲಿ ಜನಸಂಖ್ಯೆ ಕುಸಿಯಲು ಏನೇನು ಕಾರಣ? ಯಾವ್ಯಾವ ದೇಶಗಳಲ್ಲಿ ಜನಸಂಖ್ಯೆ ಕುಸಿತದ ಹಾದಿ ಹಿಡಿದಿದೆ? ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನ ಯಾವಾಗ ಹಿಂದಿಕುತ್ತೆ ಎನ್ನುವುದರ ವಿಶೇಷ ವರದಿ ಇಲ್ಲಿದೆ ನೋಡಿ. ಮಕ್ಕಳಿರಲ್ಲವ್ವಾ ಮನೆ ತುಂಬ ಎನ್ನುವ ಮಾತಿನಿಂದ ಹಿಡಿದು ನಾವಿಬ್ಬರೂ, ನಮಗಿಬ್ಬರು ಎನ್ನುವ ಘೋಷಣೆಯನ್ನು ಕೇಳಿದೆವು. ಬಳಿಕ ನಾವಿಬ್ಬರೂ, ನಮಗೆ ಒಬ್ಬರೇ ಸಾಕು ಎನ್ನುವ ಘೋಷಣೆಗೆ ಬಂದು ನಿಂತಿದ್ದೇವೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ, ವಿಶ್ವದ ಅನೇಕ ದೇಶಗಳಲ್ಲಿ ಈಗ ದಂಪತಿಗಳು ಗಂಡಾಗಲೀ, ಹೆಣ್ಣಾಗಲೀ, ಒಂದೇ ಮಗು ಸಾಕು ಎನ್ನುವ ಮನಸ್ಥಿತಿಗೆ ಬಂದು ತಲುಪಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಜನಸಂಖ್ಯಾ ಸ್ಪೋಟ ಎನ್ನುವ ಪರಿಕಲ್ಪನೆಯೇ ಈಗ ಇತಿಹಾಸದ ಪುಟ ಸೇರುವ ಕಾಲ ಹತ್ತಿರವಾಗುವಂತೆ ಮಾಡಿದೆ. ವಿಶ್ವದಲ್ಲಿ ಈಗ ಜನಸಂಖ್ಯೆ ಕುಸಿತದ ಕಾಲ ಶುರುವಾಗಿದೆ. ವಿಶ್ವದ ಪ್ರಮುಖ ದೇಶಗಳಲ್ಲಿ ಜನಸಂಖ್ಯೆ ಏರಿಕೆಯ ಬದಲು ಜನಸಂಖ್ಯೆಯ ಇಳಿಕೆಯ ಟ್ರೆಂಡ್ ಕಂಡು ಬರುತ್ತಿದೆ.

           ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ, ದಂಪತಿಗಳು ಹೆಚ್ಚು ಶಿಕ್ಷಿತರಾದಂತೆ ಹೆಚ್ಚಿನ ಮಕ್ಕಳನ್ನು ಪಡೆಯಲು ಆಸಕ್ತಿ ತೋರುತ್ತಿಲ್ಲ. ವಿಶ್ವದಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಅನೇಕ ದೇಶಗಳಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಕುಸಿಯುತ್ತಿದೆ. ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಿಗಿಂತ ಹೆಚ್ಚಾಗಿ ಮೃತಪಟ್ಟ ಜನರ ಅಂತ್ಯಸಂಸ್ಕಾರಗಳು ನಡೆಯುತ್ತಿವೆ.


          ಜನಸಂಖ್ಯೆ ಕುಸಿತ ಆರಂಭ ಯಾವಾಗ?

    ಇಟಲಿಯ ಆಸ್ಪತ್ರೆಗಳಲ್ಲಿ ಬಾಣಂತಿಯರ ವಾರ್ಡ್​ಗಳನ್ನು ಮುಚ್ಚಲಾಗಿದೆ. ಚೀನಾದ ಈಶಾನ್ಯ ಭಾಗದಲ್ಲಿ ಜನರಿಲ್ಲದೇ, ಬಿಕೋ ಎನ್ನುತ್ತಿರುವ ಘೋಸ್ಟ್ ಸಿಟಿಗಳು ಕಂಡು ಬರುತ್ತಿವೆ. ದಕ್ಷಿಣ ಕೋರಿಯಾದ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೇ ದಾಖಲಾಗುತ್ತಿಲ್ಲ. ಜರ್ಮನಿಯಲ್ಲಿ ಜನರು ವಾಸಿಸುತ್ತಿದ್ದ ಸಾವಿರಾರು ಮನೆಗಳನ್ನು ಕೆಡವಿ, ಪಾರ್ಕ್​ಗಳಾಗಿ ಪರಿವರ್ತನೆ ಮಾಡಲಾಗಿದೆ . ಇವೆಲ್ಲವೂ ಜನಸಂಖ್ಯೆ ಕುಸಿತದ ಪರಿಣಾಮ. ಆಫ್ರಿಕಾದಂಥ ಕೆಲ ದೇಶಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಕಡೆ, ಸಂತಾನೋತ್ಪತ್ತಿಯ ಪ್ರಮಾಣ ಕುಸಿಯುತ್ತಿದೆ. ಜನಸಂಖ್ಯಾ ತಜ್ಞರು ಹೇಳುವ ಪ್ರಕಾರ, ವಿಶ್ವದಲ್ಲಿ ಈ ಶತಮಾನದ ಅರ್ಧ ಭಾಗದ ಬಳಿಕ ಅಥವಾ ಅದಕ್ಕಿಂತ ಮುಂಚಿತವಾಗಿಯೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತವಾಗಲಿದೆ.

      ವಿಶ್ವದ ಪ್ರಮುಖ ದೇಶಗಳಾದ ಚೀನಾ ಮತ್ತು ಆಮೆರಿಕಾದಲ್ಲಿ ಈ ತಿಂಗಳು ಪ್ರಕಟಿಸಿದ ಜನಸಂಖ್ಯಾ ಬೆಳವಣಿಗೆಯ ದರದಲ್ಲಿ ನಿಧಾನಗತಿಯ ರೇಟ್ ದಾಖಲಾಗಿದೆ. ಜನರ ಜೀವಿತಾವಧಿ ಹೆಚ್ಚಳ, ಕಡಿಮೆ ಸಂತಾನೋತ್ಪತ್ತಿ, ಕಾರ್ಖಾನೆಯಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ ಕುಸಿತ, ನಿವೃತ್ತರ ಸಂಖ್ಯೆ ಹೆಚ್ಚಾಗಿ ಯುವಜನತೆಯೇ ವಯಸ್ಸಾದವರನ್ನು ನೋಡಿಕೊಳ್ಳಬೇಕಾಗುತ್ತೆ. ಯುವಜನತೆಯು ಆರ್ಥಿಕತೆಯನ್ನ ಮುನ್ನಡೆಸಬೇಕಾಗುತ್ತೆ. ಕುಟುಂಬ ಮತ್ತು ದೇಶದ ಪುನರ್ ರಚನೆ ಮಾಡಬೇಕಾದ ಅಗತ್ಯತೆ ಎದುರಾಗುತ್ತೆ.

      ವಿಶ್ವಸಂಸ್ಥೆಯಲ್ಲಿ ಜನಸಂಖ್ಯೆಯ ವಿಶ್ಲೇಷಣೆ ಮಾಡುತ್ತಿದ್ದ ಜರ್ಮನಿಯ ಫ್ರಾಂಕ್ ಸ್ವಿಂಕಜನಿ ಹೇಳುವ ಪ್ರಕಾರ, ಜನಸಂಖ್ಯೆಯ ಮಾದರಿಯಲ್ಲಿ ಸಂಪೂರ್ಣವಾದ ಬದಲಾವಣೆ ಅಗತ್ಯವಿದೆ. ದೇಶಗಳು ಜನಸಂಖ್ಯೆಯ ಕುಸಿತವನ್ನು ಆಳವಡಿಸಿಕೊಂಡು, ಕಡಿಮೆ ಜನಸಂಖ್ಯೆಯಲ್ಲೇ ಬದುಕುವುದನ್ನ ಕಲಿಯಬೇಕು ಎನ್ನುತ್ತಾರೆ.

              ಹೆಚ್ಚು ಮಕ್ಕಳು ಮಾಡಿಕೊಂಡರೆ..
      ಈಗಾಗಲೇ ಇದರ ಪರಿಣಾಮ ಹಾಗೂ ಸ್ಪಂದನೆಯು ವಿವಿಧ ದೇಶಗಳಲ್ಲಿ ವ್ಯಕ್ತವಾಗುತ್ತಿದೆ. ಹಂಗೇರಿಯಿಂದ ಚೀನಾದವರೆಗೂ, ಸ್ವೀಡನ್​ನಿಂದ ಜಪಾನ್​ವರೆಗೂ ದೇಶಗಳು, ವಯಸ್ಸಾದ ಜನರ ಬೇಡಿಕೆಗಳು ಹಾಗೂ ಯುವಜನತೆಯ ಅಗತ್ಯತೆಗಳ ಮಧ್ಯೆ ಸಮತೋಲನ ಮಾಡುವ ಸಂಘರ್ಷ ಎದುರಿಸುತ್ತಿವೆ. ಯುವಜನತೆಯೂ ಮಕ್ಕಳು ಹೆರುವುದನ್ನು ಪಾಸಿಟಿವ್ ಹಾಗೂ ನೆಗೆಟಿವ್ ಎರಡು ದೃಷ್ಟಿಯಿಂದ ನೋಡುತ್ತಾರೆ. ಹೆಚ್ಚು ಮಕ್ಕಳು ಮಾಡಿಕೊಂಡರೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತಾವೆ ಎಂದು ಪಾಸಿಟಿವ್ ಆಗಿಯೂ ಆಲೋಚಿಸತ್ತಾರೆ. ಆದರೆ, ಅದೇ ವೇಳೆ ಲಿಂಗ ಅಸಮಾನತೆ ಉಂಟಾಗುತ್ತೆ. ಜೀವನ ವೆಚ್ಚ ಹೆಚ್ಚಾಗುತ್ತೆ ಎಂದು ನೆಗೆಟಿವ್ ಆಗಿಯೂ ಆಲೋಚಿಸುತ್ತಾರೆ.

       20ನೇ ಶತಮಾನವು ವಿಭಿನ್ನವಾದ ಸವಾಲುಗಳನ್ನು ತಂದೊಡ್ಡಿದೆ. ಜಾಗತಿಕ ಜನಸಂಖ್ಯೆಯಲ್ಲಿ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದೆ . 1900 ರಲ್ಲಿ ವಿಶ್ವದ ಜನಸಂಖ್ಯೆ 160 ಕೋಟಿ ಇತ್ತು. 2000ನೇ ಇಸವಿ ವೇಳೆಗೆ 600 ಕೋಟಿಗೆ ಏರಿಕೆಯಾಗಿದೆ . ಜನರ ಜೀವಿತಾವಧಿ ಹೆಚ್ಚಳ, ಶಿಶು ಮರಣ ಪ್ರಮಾಣದ ಕುಸಿತ, ಹೆಚ್ಚಿನ ಮಕ್ಕಳನ್ನು ಪಡೆಯುವ ಜನರ ಆಸೆ, ಹೆಚ್ಚಿನ ಮಕ್ಕಳನ್ನು ಪಡೆಯಲು ಕೆಲ ದೇಶಗಳ ಪೋತ್ಸಾಹದ ಕಾರಣದಿಂದ ಜನಸಂಖ್ಯೆ ಹೆಚ್ಚಾಗಿದೆ. ಕೆಲ ದೇಶಗಳು ವಿಶ್ವದ ಜನಸಂಖ್ಯೆಯ ಶೇ. 15ರಿಂದ 20 ರಷ್ಟು ಜನಸಂಖ್ಯೆಯನ್ನು ಹೊಂದಿವೆ. ನೈಜಿರಿಯಾದಲ್ಲಿ ಈಗ 21 ಕೋಟಿ ಜನಸಂಖ್ಯೆ ಇದೆ. ಆದರೆ, 2100ರ ವೇಳೆಗೆ ನೈಜಿರಿಯಾ ದೇಶವು ಜನಸಂಖ್ಯೆಯಲ್ಲಿ ಆಮೆರಿಕಾವನ್ನು ಹಿಂದಿಕ್ಕಿ ಹೆಚ್ಚಿನ ಜನಸಂಖ್ಯೆ ಹೊಂದಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆಫ್ರಿಕಾ ದೇಶಗಳಲ್ಲಿ ಈಗಲೂ ದಂಪತಿಗಳು ನಾಲ್ಕರಿಂದ ಐದು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

             ಭಾರತ, ಚೀನಾ ಜನಸಂಖ್ಯೆಯಲ್ಲಿ ಏನು ಬದಲಾವಣೆ?
     2100 ರ ವೇಳೆಗೆ ಭಾರತದ ಜನಸಂಖ್ಯೆ 109ಕೋಟಿ, ನೈಜಿರಿಯಾ ಜನಸಂಖ್ಯೆ 79 ಕೋಟಿ, ಚೀನಾದ ಜನಸಂಖ್ಯೆ 73 ಕೋಟಿ, ಆಮೆರಿಕಾದ ಜನಸಂಖ್ಯೆ 33.6 ಕೋಟಿ, ಪಾಕಿಸ್ತಾನದ ಜನಸಂಖ್ಯೆ 24 ಕೋಟಿ ಆಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವರದಿ ಮಾಡಿದೆ. ಈ ವರದಿ ಪ್ರಕಾರ, ನೈಜಿರಿಯಾ ಹೊರತುಪಡಿಸಿ ಉಳಿದ ರಾಷ್ಟ್ರಗಳಲ್ಲಿ ಜನಸಂಖ್ಯೆ ಕುಸಿತವಾಗಲಿದೆ. ಚೀನಾದ ಜನಸಂಖ್ಯೆಯಲ್ಲಿ ಶೇ.48 ರಷ್ಟು ಕುಸಿತವಾಗಲಿದೆ .

     ಹೆಚ್ಚಿನ ಸಂತಾನೋತ್ಪತ್ತಿಯ ಯುಗ ಅಂತ್ಯವಾಗುತ್ತಿದೆ. ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದು, ಸಂತಾನೋತ್ಪತ್ತಿ ತಡೆಗೆ ಗರ್ಭ ನಿರೋಧಕಗಳನ್ನು ಬಳಸುತ್ತಿದ್ದಾರೆ. ಮಕ್ಕಳನ್ನು ಹೊಂದುವ ಆತಂಕ, ಉದ್ವೇಗ ತೀವ್ರವಾಗುತ್ತಿದೆ. ಹೆಚ್ಚಿನ ದಂಪತಿಗಳು ಪ್ರಗ್ನೆನ್ಸಿಯನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಕಡಿಮೆ ಮಕ್ಕಳು ಹುಟ್ಟುತ್ತಿವೆ. ಜನಸಂಖ್ಯೆ ಬೆಳವಣಿಗೆಯಲ್ಲಿ ಮುಂದಿದ್ದ ಭಾರತ, ಮೆಕ್ಸಿಕೋದಂಥ ರಾಷ್ಟ್ರಗಳಲ್ಲೂ ಈಗ ಜನನ ಪ್ರಮಾಣ ಕುಸಿಯುತ್ತಿದೆ. ಒಂದು ಕುಟುಂಬಕ್ಕೆ 2:1 ರ ಅನುಪಾತಕ್ಕೆ ಬಂದಿದೆ. ಒಂದು ಕುಟುಂಬಕ್ಕೆ ಒಂದೇ ಮಗು ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಮೆರಿಕಾದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

               ವಲಸಿಗರೂ ಇಲ್ಲದೆ ಜನಸಂಖ್ಯೆ ಕುಸಿತ
     ಬದಲಾವಣೆಗೆ ದಶಕಗಳೇ ಬೇಕಾಗಬಹುದು. ಆದರೆ, ಒಮ್ಮೆ ಬದಲಾವಣೆ ಆರಂಭವಾದರೆ, ಏರಿಕೆಯಂತೆಯೇ ಇಳಿಕೆಯೂ ಆಗುತ್ತದೆ. ಮಕ್ಕಳು ತಮ್ಮ ಪೋಷಕರಿಗಿಂತ ಕಡಿಮೆ ಮಕ್ಕಳನ್ನು ಪಡೆಯುವುದು ಈಗಾಗಲೇ ಅನೇಕ ದೇಶಗಳಲ್ಲಿ ಕಂಡು ಬರುತ್ತಿದೆ. ಬಂಡೆಯ ಮೇಲಿಂದ ಕಲ್ಲುನ್ನು ಕೆಳಗೆ ಎಸೆದ ವೇಗದಲ್ಲೇ ಜನಸಂಖ್ಯೆ ಕುಸಿಯುತ್ತಿದೆ. ಆಮೆರಿಕಾ, ಆಸ್ಟ್ರೇಲಿಯಾ, ಕೆನಡಾ ದೇಶಗಳಲ್ಲಿ ಜನನ ದರ 1.5 ರಿಂದ 2 ರಷ್ಟು ಮಾತ್ರ ಇದೆ. ಈ ದೇಶಗಳು  ವಲಸಿಗರಿಗೆ ದೇಶದೊಳಗೆ ಪ್ರವೇಶ ಕೊಡುವ ಮೂಲಕ ಜನಸಂಖ್ಯೆ ಕುಸಿತವನ್ನು ತಡೆದಿವೆ.

     ಪೂರ್ವ ಯೂರೋಪ್ ಹಾಗೂ ಏಷ್ಯಾ ರಾಷ್ಟ್ರಗಳಲ್ಲಿ ವಲಸಿಗರಿಲ್ಲದೇ, ಜನಸಂಖ್ಯೆ ಕುಸಿಯುತ್ತಿದೆ. ಕೆಲ ದಶಕಗಳ ಹಿಂದೆ ಜನಸಂಖ್ಯಾ ಬಾಂಬ್ ಸ್ಪೋಟ ಚರ್ಚೆಯ ವಿಷಯವಾಗಿದ್ದು, ಈಗ ಅಂತಿಮವಾಗಿ ತೆರೆಮರೆಗೆ ಸರಿಯುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ದಕ್ಷಿಣ ಕೊರಿಯಾದಲ್ಲಿ ಜನನ ದರ 2019ರಲ್ಲಿ ದಾಖಲೆಯ 0.9ಕ್ಕೆ ಕುಸಿದಿತ್ತು. ಓರ್ವ ಮಹಿಳೆಗೆ ಒಂದಕ್ಕಿಂತ ಕಡಿಮೆ ಸರಾಸರಿ ಮಕ್ಕಳ ಜನನ ಆಗಿರುವ ದಾಖಲೆ ನಿರ್ಮಾಣವಾಗಿದೆ. ಅಂದರೆ, ಮಹಿಳೆಯರ ಪೈಕಿ ಶೇ.92 ರಷ್ಟು ಮಹಿಳೆಯರು ಮಾತ್ರ ಮಕ್ಕಳನ್ನು ಪಡೆದಿದ್ದಾರೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಇದು ಅತ್ಯಂತ ಕಡಿಮೆ ಜನನ ಪ್ರಮಾಣ. ದಕ್ಷಿಣ ಕೊರಿಯಾದಲ್ಲಿ ಕಳೆದ 59 ತಿಂಗಳಿನಿಂದ ಹುಟ್ಟುವ ಮಕ್ಕಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ.

        ಜನನ ಪ್ರಮಾಣ ಕುಸಿತಕ್ಕೆ ವೇಗವಾಗಿ ನಡೆಯುತ್ತಿರುವ ಕೈಗಾರೀಕರಣ ಕೂಡ ಕಾರಣ. ಗ್ರಾಮೀಣ ಪ್ರದೇಶದಿಂದ ಜನರು ದೊಡ್ಡ ದೊಡ್ಡ ನಗರ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ದಕ್ಷಿಣ ಕೊರಿಯಾದ ಸಿಯೋಲ್ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಸಿಯೋಲ್ ನಗರದ ಮೂಲಸೌಕರ್ಯ, ವಸತಿ ಸೌಕರ್ಯದ ಮೇಲೆ ಒತ್ತಡವೂ ಬಿದ್ದಿದೆ. ಆದರೆ, ದಕ್ಷಿಣ ಕೊರಿಯಾದ ಗ್ರಾಮೀಣ ಟೌನ್​ಗಳಲ್ಲಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿವೆ. ಶಾಲಾ ಮೈದಾನಗಳಲ್ಲಿ ಮಕ್ಕಳಿಲ್ಲದೇ, ಕಸ, ಕಳೆ ತುಂಬಿಕೊಂಡಿದೆ.

         ಜನಸಂಖ್ಯೆ ಹೆಚ್ಚಳಕ್ಕೂ ವಿವಿಧ ಯೋಜನೆ
     ಸಿಯೋಲ್ ಹೊರಗಿನ ನಗರಗಳ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೇ ದಾಖಲಾಗುತ್ತಿಲ್ಲ. 1992 ರಲ್ಲಿ 9 ಲಕ್ಷದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 5 ಲಕ್ಷಕ್ಕೆ ಕುಸಿದಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಕೆಲ ಶಾಲೆ, ವಿವಿಗಳು ಸ್ಕಾಲರ್ ಶಿಪ್ ಹಾಗೂ ಐ ಪೋನ್ ನೀಡುವ ಆಫರ್ ನೀಡುತ್ತಿವೆ. ಜನನ ಪ್ರಮಾಣ ಹೆಚ್ಚಿಸಲು ಸರ್ಕಾರ, ಮಕ್ಕಳನ್ನು ಹೆತ್ತವರಿಗೆ ಬೋನಸ್ ನೀಡುತ್ತಿದೆ. ಗರ್ಭೀಣಿಯರ ಚಿಕಿತ್ಸೆ ಹಾಗೂ ಪ್ರೆಗ್ನೆನ್ಸಿ ವೇಳೆ ಮಕ್ಕಳ ಭತ್ಯೆ ಹಾಗೂ ವೈದ್ಯಕೀಯ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಗಿಫ್ಟ್, ಮಕ್ಕಳ ಬಟ್ಟೆ, ಬೊಂಬೆ ನೀಡುವ ಮೂಲಕ ಸ್ವಾಗತಿಸುತ್ತಿದ್ದಾರೆ. ಸರ್ಕಾರ ನೂರಾರು ಕಿಂಡರ್ ಗಾರ್ಡನ್, ಬೇಬಿ ಕೇರ್ ಸೆಂಟರ್ ಗಳನ್ನು ಆರಂಭಿಸಿದೆ. ಸಿಯೋಲ್​ನಲ್ಲಿ ಎಲ್ಲ ಬಸ್ ನಿಲ್ದಾಣ, ಸಬ್ ವೇಗಳಲ್ಲಿ ಪಿಂಕ್ ಸೀಟನ್ನು ಗರ್ಭೀಣಿ ಮಹಿಳೆಯರಿಗಾಗಿ ಮೀಸಲಿಡಲಾಗಿದೆ.

      ದಕ್ಷಿಣ ಕೊರಿಯಾದ ಉಪ ಪ್ರಧಾನಿ ಹಾಂಗ್ ನಾಮ್ ಕೀ ಅವರೇ ಹೇಳಿರುವ ಪ್ರಕಾರ, ಸರ್ಕಾರವು ಮಹಿಳೆಯರು ಹೆಚ್ಚು ಮಕ್ಕಳನ್ನ ಪಡೆಯಲು ಪೋತ್ಸಾಹಿಸಲು ಕಳೆದ 15 ವರ್ಷಗಳಿಂದ 178 ಬಿಲಿಯನ್ ಡಾಲರ್ ಹಣ ವೆಚ್ಚ ಮಾಡಿದೆ. ಆದರೂ, ಹೆಚ್ಚಿನ ಮಕ್ಕಳ ಜನನವಾಗಿಲ್ಲ.

         ನಮ್ಮ ಅಜ್ಜ-ಅಜ್ಜಿಗೆ ಆರು ಮಕ್ಕಳಿದ್ದರು. ನಮ್ಮ ತಂದೆ-ತಾಯಿಗೆ ಐದು ಜನ ಮಕ್ಕಳು. ಏಕೆಂದರೇ, ಆ ಜನರೇಷನ್ ನಲ್ಲಿ ಹೆಚ್ಚಿನ ಮಕ್ಕಳನ್ನು ಪಡೆಯಲು ಆಸಕ್ತಿ ಹೊಂದಿದ್ದರು. ಆದರೇ, ನನಗೆ ಒಂದೇ ಮಗು ಇದೆ ಎಂದು 38 ವರ್ಷದ ಕಿಮ್ ಮಿ ಕ್ಯುಂಗ್ ಹೇಳುತ್ತಾರೆ. ನನ್ನ ಹಾಗೂ ನನ್ನ ಕಿರಿಯ ತಲೆಮಾರಿನವರು ಎಲ್ಲವನ್ನೂ ಪರಿಗಣಿಸುತ್ತೇವೆ. ಹೆಚ್ಚಿನ ಮಕ್ಕಳನ್ನು ಹೊಂದಲು ಆಸಕ್ತಿ ಹೊಂದಿಲ್ಲ ಎಂದು ಕಿಮ್ ಮಿ ಕ್ಯುಂಗ್ ಹೇಳುತ್ತಾರೆ. ಇನ್ನು ದಕ್ಷಿಣ ಕೊರಿಯಾದಿಂದ ಸಾವಿರಾರು ಮೈಲಿ ದೂರದಲ್ಲಿರುವ ಇಟಲಿಯಲ್ಲೂ ಜನರು ಇದೇ ಭಾವನೆ, ಅಭಿಪ್ರಾಯ ಹೊಂದಿದ್ದಾರೆ.

              ಜನಸಂಖ್ಯಾ ಕುಸಿತದ ಹಾದಿ
    ದಕ್ಷಿಣ ಇಟಲಿಯಲ್ಲಿರುವ ಕಪ್ರಕೋಟಾ ಎನ್ನುವ ಸಣ್ಣ ಟೌನ್​ನಲ್ಲಿ 18ನೇ ಶತಮಾನದ ಕಲ್ಲು ಕಟ್ಟಡದ ಮೇಲೆ ಕಿಂಡರ್ ಗಾರ್ಟನ್ ಶಾಲೆ ಎಂದು ಬರೆದಿದೆ. ಆದರೇ, ಈಗ ಈ ಬಿಲ್ಡಿಂಗ್ ನರ್ಸಿಂಗ್ ಹೋಮ್ ಆಗಿದೆ. 93 ವರ್ಷದ ಕನಸೆಟ್ಟಾ ಡಿಆ್ಯಂಡ್ರಿಯಾ, ಕಿಂಡರ್ ಗಾರ್ಟನ್ ಶಾಲೆ ವಿದ್ಯಾರ್ಥಿ ಹಾಗೂ ಶಿಕ್ಷಕಿಯಾಗಿದ್ದರು. ಆದರೆ, ಈಗ ನರ್ಸಿಂಗ್ ಹೋಮ್​ನಲ್ಲಿದ್ದಾರೆ. ಇಲ್ಲಿ ಬಹಳಷ್ಟು ಕುಟುಂಬಗಳು, ಬಹಳಷ್ಟು ಮಕ್ಕಳಿದ್ದರು. ಆದರೆ, ಈಗ ಯಾರೊಬ್ಬರು ಇಲ್ಲ ಎನ್ನುತ್ತಾರೆ. ಕಪ್ರಕೋಟಾ ಟೌನ್ ಜನಸಂಖ್ಯೆಯು ತೀವ್ರವಾಗಿ ಕುಸಿದಿದೆ. 5ಸಾವಿರ ಜನಸಂಖ್ಯೆ ಇದ್ದ ನಗರದಲ್ಲಿ ಈಗ 800 ಮಂದಿ ಮಾತ್ರ ಇದ್ದಾರೆ. ಸ್ನೂಕರ್ ಆಟವಾಡಲು ಒಂದು ತಂಡ ಕಟ್ಟಲು ಕೂಡ ಆಟಗಾರರು ಸಿಗುತ್ತಿಲ್ಲ.

    ಕಪ್ರಕೋಟಾದಿಂದ ಅರ್ಧ ಗಂಟೆ ಪ್ರಯಾಣದ ದೂರದಲ್ಲಿರುವ ಅಗನೋನ್ ಟೌನ್ ಆಸ್ಪತ್ರೆಯ ಬಾಣಂತಿಯರ ವಾರ್ಡನ್ನು ದಶಕದ ಹಿಂದೆಯೇ ಮುಚ್ಚಲಾಗಿದೆ. ಏಕೆಂದರೆ, ವರ್ಷಕ್ಕೆ 500ಕ್ಕಿಂತ ಕಡಿಮೆ ಮಕ್ಕಳು ಜನಿಸುತ್ತಿದ್ದರು. ಈ ವರ್ಷ ಅಗನೋನ್ ಟೌನ್​ನಲ್ಲಿ ಆರು ಮಕ್ಕಳು ಮಾತ್ರ ಹುಟ್ಟಿವೆ.

     ಇಟಲಿಯ ಜನಸಂಖ್ಯೆ ಕುಸಿತವು ಇನ್ನೂ ಕಗ್ಗತ್ತಲಲ್ಲಿ ಇದೆ ಎಂದು ಪೋಪ್ ಪ್ರಾನ್ಸಿಸ್ ಹೇಳಿದ್ದಾರೆ. ಬಹಳಷ್ಟು ದೇಶಗಳಲ್ಲಿ ಬಹಳಷ್ಟು ಜನರು, ಈ ಜನಸಂಖ್ಯೆ ಕುಸಿತವನ್ನು ವರ್ಣಿಸಲು ತಮ್ಮದೇ ಆದ ರೂಪಕ ಬಳಸಬಹುದು. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವರದಿ ಪ್ರಕಾರ, 195 ದೇಶಗಳ ಪೈಕಿ 183 ದೇಶಗಳಲ್ಲಿ ಜನನ ಪ್ರಮಾಣ ಬಾರಿ ಕುಸಿಯಲಿದೆ.

             ಚೀನಾ ಜನಸಂಖ್ಯೆ ಲೆಕ್ಕಾಚಾರ ಹೀಗಿದೆ
      ವಿಜ್ಞಾನಿಗಳ ಪ್ರಕಾರ, ಚೀನಾದಲ್ಲಿ ಜನಸಂಖ್ಯೆಯಲ್ಲಿ ಭಾರಿ ಕುಸಿತವಾಗಲಿದೆ. ಚೀನಾದಲ್ಲಿ ಸದ್ಯ ಇರುವ140ಕೋಟಿ ಜನಸಂಖ್ಯೆಯು 2100 ರ ವೇಳೆಗೆ 73 ಕೋಟಿಗೆ ಕುಸಿಯಲಿದೆ. ಹೀಗಾದರೆ, ಜನಸಂಖ್ಯೆ ಪೀರಮಿಡ್ ಖಂಡಿತವಾಗಿಯೂ ಕುಸಿಯಲಿದೆ. ಚೀನಾ ದೇಶವು 18 ವರ್ಷ ಮೇಲ್ಪಟ್ಟವರಿಗಿಂತ 85 ವರ್ಷ ಮೇಲ್ಪಟ್ಟವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಲಿದೆ. ಚೀನಾದ ಈಶಾನ್ಯ ಭಾಗದಲ್ಲಿ ಕಳೆದೊಂದು ದಶಕದಿಂದ ಶೇ.1.2 ರಷ್ಟು ಜನಸಂಖ್ಯೆ ಕುಸಿತವಾಗುತ್ತಿದೆ ಎಂದು ಚೀನಾ ದೇಶವೇ ಅಂಕಿಅಂಶ ಬಿಡುಗಡೆ ಮಾಡಿದೆ. ಹೆಂಗಾಂಗ್‌ ಘೋಸ್ಟ್ ಸಿಟಿಯು 2010ರಿಂದ ಶೇ.10 ರಷ್ಟು ಜನಸಂಖ್ಯೆಯನ್ನು ಕಳೆದುಕೊಂಡಿದೆ. ಮನೆಗಳ ಬೆಲೆ ಕುಸಿದಿದ್ದು, ಜನರು ಮನೆಗಳ ದರವನ್ನು ತರಕಾರಿಗೆ ಹೋಲಿಸುತ್ತಿದ್ದಾರೆ.

     ದಕ್ಷಿಣ ಕೊರಿಯಾದಲ್ಲಿ ವಿಶ್ವವಿದ್ಯಾಲಯಗಳನ್ನು ಪರಸ್ಪರ ವಿಲೀನ ಮಾಡಲಾಗುತ್ತಿದೆ. ಜಪಾನ್​ನಲ್ಲಿ ಮಕ್ಕಳ ಡೈಪರ್ ಗಿಂತ ವಯಸ್ಕರ ಡೈಪರ್​ಗಳು ಹೆಚ್ಚು ಮಾರಾಟವಾಗುತ್ತಿವೆ. ಸ್ವೀಡನ್​ನಲ್ಲಿ ಸಂಪನ್ಮೂಲವನ್ನು ಶಾಲೆಗಳಿಂದ ಸೀನಿಯರ್ ಸಿಟಿಜನ್ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಲಾಗುತ್ತಿದೆ. ಬಹಳಷ್ಟು ದೇಶಗಳಲ್ಲಿ ವಯಸ್ಸಾದವರನ್ನು ಕೆಲಸದಲ್ಲಿ ಮುಂದುವರಿಯುವಂತೆ ಸೂಚಿಸಲಾಗುತ್ತಿದೆ. ಜರ್ಮನಿಯಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸುನ್ನು 67ರಿಂದ 69ಕ್ಕೆ ಹೆಚ್ಚಳ ಮಾಡುವುದನ್ನು ಪರಿಗಣಿಸಲಾಗುತ್ತಿದೆ.

         ಈ ಸಂಬಳದಿಂದ ಮಕ್ಕಳು, ಪೋಷಕರನ್ನು ಸಾಕುವುದು ಕಷ್ಟ!
    ಜನಸಂಖ್ಯೆ ಕುಸಿತದ ಬಗ್ಗೆ ಜನಸಂಖ್ಯಾ ಶಾಸ್ತ್ರ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಬಹಳಷ್ಟು ಮಹಿಳೆಯರು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿದ್ದಾರೆ. ಕಡಿಮೆ ಜನಸಂಖ್ಯೆ ಇದ್ದಾಗ, ಹೆಚ್ಚಿನ ವೇತನ ಸಿಗುತ್ತದೆ. ಸಮಾನ ಸಮಾಜ ನಿರ್ಮಾಣವಾಗುತ್ತದೆ. ಕಾರ್ಬನ್ ಹೊಗೆಯು ಕಡಿಮೆಯಾಗುತ್ತದೆ. ಕಡಿಮೆ ಮಕ್ಕಳಿದ್ದಾಗ, ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯ ಎಂದು ಜರ್ಮನ್ ಜನರು ಹೇಳುತ್ತಿದ್ದಾರೆ. ಜನಸಂಖ್ಯೆ ಕುಸಿಯುತ್ತಿರುವ ದೇಶಗಳು ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. ಕಡಿಮೆ ಜನಸಂಖ್ಯೆ ಇದ್ದಾಗ, ಪರಿಸರದ ಮೇಲೆ ಕಡಿಮೆ ಒತ್ತಡ ಇರುತ್ತದೆ ಎನ್ನುವುದಕ್ಕೂ ಯಾವುದೇ ಗ್ಯಾರಂಟಿ ಇಲ್ಲ.

    ಬಹಳಷ್ಟು ದೇಶಗಳ ಸರ್ವೇ ಪ್ರಕಾರ, ಯುವಜನತೆ ಹೆಚ್ಚಿನ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಆದರೆ, ಅನೇಕ ಸಮಸ್ಯೆಗಳಿವೆ. ಅನ್ನಾ ಪರೋಲಿನಿ ಇಟಲಿ ದೇಶದ ಯುವಜನತೆ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. 37 ವರ್ಷದ ಅನ್ನಾ ಪರೋಲಿನಿ ಉತ್ತಮ ಉದ್ಯೋಗಾವಕಾಶಕ್ಕಾಗಿ ಸಣ್ಣ ಟೌನ್​ನಿಂದ ಮಿಲಾನ್ ನಗರಕ್ಕೆ ಬಂದಿದ್ದಾರೆ. ಈಗ ಬಾಯ್ ಫ್ರೆಂಡ್ ಜೊತೆ ಇದ್ದಾರೆ. ಮಕ್ಕಳನ್ನ ಪಡೆಯುವ ಆಸೆ ಇದೆ. ಆದರೆ, ತಿಂಗಳಿಗೆ ಬರುವ 2 ಸಾವಿರ ಯೂರೋದಿಂದ ಮಕ್ಕಳು, ಪೋಷಕರನ್ನು ಸಾಕಲು ಸಾಧ್ಯವಾಗಲ್ಲ ಎಂಬ ಭೀತಿ ಇದೆ ಎಂದು ಅನ್ನಾ ಪರೋಲಿನಿ ಹೇಳುತ್ತಾರೆ.

     ಇದು ಕೇವಲ ಅನ್ನಾ ಪರೋಲಿನಿ ಅಭಿಪ್ರಾಯ ಮಾತ್ರವಲ್ಲ, ಜನಸಂಖ್ಯೆ ಕುಸಿಯುತ್ತಿರುವ ಅನೇಕ ದೇಶಗಳ ಯುವಜನತೆಯ ಅಭಿಪ್ರಾಯ. ಭೂಮಿಯ ಮೇಲೆ ಜನಸಂಖ್ಯೆ ಕಡಿಮೆಯಾದಾಗ, ಪ್ರಾಕೃತಿಕ ಸಂಪನ್ಮೂಲದ ಮೇಲಿನ ಒತ್ತಡ ಕಡಿಮೆಯಾಗುತ್ತೆ .ಹಮಾಮಾನ ಬದಲಾವಣೆಯ ಮೇಲಿನ ಪರಿಣಾಮ ನಿಧಾನವಾಗುತ್ತೆ. ಮನೆಯಲ್ಲಿ ಮಹಿಳೆಯರ ಮೇಲಿನ ಮನೆಕೆಲಸದ ಹೊರೆ ಕಡಿಮೆಯಾಗುತ್ತೆ

         5 ದಶಕದಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆ ಕುಸಿದಿದೆ
    ಚೀನಾದ ರಾಜಧಾನಿ ಬೀಜಿಂಗ್​ನಲ್ಲೂ 2020ರಲ್ಲಿ ಕಡಿಮೆ ಮಕ್ಕಳು ಹುಟ್ಟಿವೆ. ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ 2022ರಿಂದ ಜನಸಂಖ್ಯೆ ಕುಸಿತ ಆರಂಭವಾಗಲಿದೆ. 2027ರಿಂದ ಚೀನಾ ದೇಶದ ಜನಸಂಖ್ಯೆ ಕುಸಿತ ಆರಂಭವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಬೀಜಿಂಗ್ ನಗರದಲ್ಲಿ 2.1 ಕೋಟಿ ಜನರಿದ್ದಾರೆ. ಆದರೆ, 2019ಕ್ಕೆ ಹೋಲಿಸಿದರೆ 2020ರಲ್ಲಿ ಬೀಜಿಂಗ್​ನಲ್ಲಿ 32 ಸಾವಿರ ಕಡಿಮೆ ಮಕ್ಕಳು ಹುಟ್ಟಿವೆ. ಬೀಜಿಂಗ್ ಮಾತ್ರವಲ್ಲದೇ, ಪೂರ್ವ ಭಾಗದ ಜೀಜಿಯಾಂಗ್, ದಕ್ಷಿಣ ಭಾಗದ ಗೌಂಗ್ ಡಾಂಗ್​ನಲ್ಲಿ ಕಳೆದ 6ರಿಂದ 10 ವರ್ಷದಲ್ಲೇ 2020ರಲ್ಲಿ ಕಡಿಮೆ ಮಕ್ಕಳು ಹುಟ್ಟಿವೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

     ಕಳೆದ 5 ದಶಕದಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಕುಸಿದಿದೆ ಎಂದು ಲಂಡನ್‌ನ ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಚೀನಾದ ಜನಸಂಖ್ಯೆ 140ಕೋಟಿಗಿಂತ ಕಡಿಮೆಗೆ ಕುಸಿಯುವ ಸಾಧ್ಯತೆ ಇದೆ. ಜನಸಂಖ್ಯಾ ಕುಸಿತದ ಅಂಕಿಅಂಶಗಳನ್ನು ಸರ್ಕಾರದ ಒಪ್ಪಿಗೆಯ ಬಳಿಕವೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈಗ ಚೀನಾ ಸರ್ಕಾರದ ಮೇಲೆ ಹೆಚ್ಚಿನ ಮಕ್ಕಳನ್ನು ಪಡೆಯುವಂತೆ ಜನರನ್ನು ಪೋತ್ಸಾಹಿಸುವ ಒತ್ತಡ ಕೂಡ ನಿರ್ಮಾಣವಾಗಿದೆ. ಚೀನಾದಲ್ಲಿ 2019ರಲ್ಲಿ 5.9 ಲಕ್ಷ ಮಕ್ಕಳ ಜನನದಲ್ಲಿ ಕುಸಿತವಾಗಿದೆ. ಒಂದು ಸಾವಿರಕ್ಕೆ ಶೇ.10.4 ರಷ್ಟು ಜನನ ದರ ದಾಖಲಾಗಿದೆ. ಇದು 1949ರ ನಂತರದ ಅತಿ ಕನಿಷ್ಠ ಜನನ ದರ. 2016ರಲ್ಲಿ ಇಬ್ಬರು ಮಕ್ಕಳನ್ನು ಪಡೆಯುವ ನಿಯಮ ಜಾರಿಗೆ ತಂದ ಬಳಿಕವೂ ಜನಸಂಖ್ಯೆ ಹೆಚ್ಚಾಗಿಲ್ಲ.

     ಬೀಜಿಂಗ್​ನ ಥಿಂಕ್ ಟ್ಯಾಂಕ್ ಸೆಂಟರ್ ಜನಸಂಖ್ಯಾ ಶಾಸ್ತ್ರಜ್ಞ ವುಹಾಂಗ್ ಜೆಯಾಂಗ್ ಗ್ಲೋಬಲ್ ಟೈಮ್ಸ್​ಗೆ ಹೇಳಿರುವ ಪ್ರಕಾರ, ಮಕ್ಕಳ ಜನನ ಹಾಗೂ ಮರಣದ ನಡುವೆ ಹೆಚ್ಚಿನ ಅಂತರ ಇಲ್ಲ. ಬೀಜಿಂಗ್​ನಲ್ಲಿ 2022ರಿಂದ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಸಹಜವಾಗಿಯೇ ಜನಸಂಖ್ಯೆಯಲ್ಲಿ ನಕಾರಾತ್ಮಕ ಬೆಳವಣಿಗೆ ಶುರುವಾಗಲಿದೆ. ಇದರಿಂದ ಚೀನಾದ ರಾಜಧಾನಿ ಬೀಜಿಂಗ್​ನ ಆರ್ಥಿಕ ಬೆಳವಣಿಗೆಗೂ ಹೊಡೆತ ಬೀಳಲಿದೆ.

        ಬೀಜಿಂಗ್ ಅಂಕಿಅಂಶಗಳ ಆಧಾರದಲ್ಲಿ ಹೇಳುವುದಾದರೆ, 2027ರಿಂದ ಚೀನಾದ ಜನಸಂಖ್ಯೆ ಕೂಡ ಕುಸಿತದ ಟ್ರೆಂಡ್ ಆರಂಭವಾಗಲಿದೆ. ಇದರಿಂದಾಗಿ 2022ರ ವೇಳೆಗೆ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ದೇಶವಾಗಬಹುದು. ಚೀನಾ ಜನಸಂಖ್ಯೆಯಲ್ಲಿ 2ನೇ ಸ್ಥಾನಕ್ಕೆ ಕುಸಿಯಲಿದೆ. ವಿಶ್ವಸಂಸ್ಥೆಯು 2017ರ ವರದಿಯಲ್ಲಿ 2024ರ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನ ಹಿಂದಿಕ್ಕಲಿದೆ ಎಂದು ಹೇಳಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries