ಕುಂಬಳೆ: ಕೋವಿಡ್ ಬಾಧಿಸಿ ಮೃತಪಟ್ಟ ದಯಾನಂದ ಗಟ್ಟಿ ನಾಯ್ಕಾಪು ಇವರ ಅಂತ್ಯಸಂಸ್ಕಾರವನ್ನು ನಾಯ್ಕಾಪಿನ ಹಿಂದೂ ರುದ್ರಭೂಮಿಯಲ್ಲಿ ಕೋವಿಡ್ ಮಾನದಂಡದೊಂದಿಗೆ ಸೋಮವಾರ ಸಾಮಾಜಿಕ, ಸಾಂಸ್ಕøತಿಕ ಸಂಘಟನೆಯಾದ ಸ್ಪಂದನ ಕುಂಬಳೆ ನಡೆಸಿಕೊಟ್ಟಿದ್ದು ಸಾರ್ವಜನಿಕರ ಶ್ಲಾಘನೆಗೊಳಗಾಗಿದೆ.
ಸ್ಪಂದನ ಕುಂಬಳೆ ಸಂಘಟನೆಯ ಸದಸ್ಯರಾದ ಮನೋಜ್ ಸುವರ್ಣ ಶಾಂತಿಪಳ್ಳ, ಸಮೀರ್ ಕಾಕಗೇಟ್, ರಾಜೇಶ್ ಅನಂತಪುರ, ಫೈಝಲ್ ಕೊಡ್ಯಮ್ಮೆ ಇವರ ಮುತುವರ್ಜಿಯಲ್ಲಿ, ಸ್ಪಂದನ ಕುಂಬಳೆ ಇದರ ರೂವಾರಿಗಳಾದ ಅನಂತಪುರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಉದಯಕುಮಾರ್ ಗಟ್ಟಿ ಮತ್ತು ಟ್ರಸ್ಟ್ ಸದಸ್ಯ ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲ ನೇತೃತ್ವದಲ್ಲಿ ಮೃತಪಟ್ಟ ವ್ಯಕ್ತಿಯ ಸಾಮುದಾಯಿಕ ರೀತಿ-ರಿವಾಜುಗಳೊಂದಿಗೆ ಅಂತ್ಯ ವಿಧಿಗಳನ್ನು ನೆರವೇರಿಸಲಾಯಿತು. ಕೃಷ್ಣ ಗಟ್ಟಿ ಚಿರಂಜೀವಿ ಕುಂಬಳೆ ಮತ್ತು ಅನಿಲ್ ಕುಮಾರ್ ಗಟ್ಟಿ ದೇವಿನಗರ ಸಹಕರಿಸಿದರು.
ಸಂಘಟನೆಯ ಈ ಸೇವಾ ಚಟುವಟಿಕೆ ಮೃತ ವ್ಯಕ್ತಿಯ ಕುಟುಂಬ ಸದಸ್ಯರ ಮತ್ತು ಊರ ಜನರ ಶ್ಲಾಘನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕುಂಬಳೆ ಪ್ರದೇಶದಲ್ಲಿ ಕೋವಿಡ್ ಪೀಡಿತರಾಗಿ ಮೃತಪಟ್ಟವರ, ಜಾತಿ-ಮತಭೇದವಿಲ್ಲದೆ ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರ ವನ್ನು ಮಾಡಲು ತಮ್ಮನ್ನು ಸಂಪರ್ಕಿಸಿದಲ್ಲಿ ಮಾಡಿಕೊಡುವುದಾಗಿ ಟೀಮ್ ಸ್ಪಂದನ ಕುಂಬಳೆ ಯ ಸದಸ್ಯರು ತಿಳಿಸಿದ್ದಾರೆ.








