ಕಾಸರಗೋಡು: ಇತರ ರಾಜ್ಯಗಳ ಕಾರ್ಮಿಕರ ಸಹಾಯಕ್ಕೆ ಕಾರ್ಮಿಕ ಇಲಾಖೆ ಮತ್ತು ಸಪ್ಲೈ ಕೋ ಸಜ್ಜಾಗಿದ್ದು, ಇದರ ಅಂಗವಾಗಿ ಲಾಕ್ ಡೌನ್ ಅವಧಿಯಲ್ಲಿ ಅಕ್ಕಿ ಸಹಿತ ಧಾನ್ಯಗಳ ಕಿಟ್ ಪ್ರತಿ ಕಾರ್ಮಿಕಗೆ ತಲಪಿಸಲಾಗುತ್ತಿದೆ. ನೌಕರಿ ಮಾಲೀಕರ ವ್ಯಾಪ್ತಿಯಲ್ಲಿ ಅಲ್ಲದೆ ಇತರೆಡೆ ದುಡಿಯುತ್ತಿರುವ 5 ಸಾವಿರಕ್ಕೂ ಅಧಿಕ ಇತರರಾಜ್ಯಗಳ ಕಾರ್ಮಿಕರು ಕಾಸರಗೋಡು ಜಿಲ್ಲೆಯಲ್ಲಿದ್ದಾರೆ ಎಂದು ಪ್ರಾಥಮಿಕ ಗಣನೆ ತಿಳಿಸುತ್ತಿದೆ. ಕಾಸರಗೋಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 1645 ಮಂದಿಗೂ, ಕಾಞಂಗಾಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ1625 ಮಂದಿಗೂ ಸೇರಿದಂತೆ ಇದುವರೆಗೆ 3270 ಮಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ಕಾರ್ಮಿಕ ತಂಗಿರುವ ಪ್ರದೇಶಗಳಿಗೇ ತೆರಳಿ ಇಲಾಖೆಸಿಬ್ಬಂದಿ ಕಿಟ್ ವಿತರಿಸುತ್ತಿದ್ದಾರೆ.
ಪ್ರತಿ ಪ್ರದೇಶಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಸಹಾಯದೊಂದಿಗೆ ಈ ಕಾರ್ಮಿಕರನ್ನು ಪತ್ತೆಮಾಡಲಾಗುತ್ತಿದೆ. ಈ ಮೂಲಕ ಅವರ ಮಾಹಿತಿಗಳ ಸಂಗ್ರಹವೂ ನಡೆಯುತ್ತಿದೆ ಎಂದು ಕಾಸರಗೋಡು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್ ತಿಳಿಸಿದರು.ಇತರ ರಾಜ್ಯಗಳ ಕಾರ್ಮಿಕರು ತಂಗಿರುವ ಪ್ರದೇಶಗಳಿಗೆ ತೆರಳಿ ಕೋವಿಡ್ ವಿರುದ್ಧ ಜನಜಾಗೃತಿಮೂಡಿಸುವ ಪ್ರಕ್ರಿಯೆಯೂ ನಡೆಯುತ್ತಿದ್ದು, ಆಯಾ ಕಾರ್ಮಿಕರ ಭಾಷೆ ಬಲ್ಲ ಸಿಬ್ಬಂದಿಯ ಸಹಾಯವನ್ನೂ ಈ ನಿಟ್ಟಿನಲ್ಲಿ ಬಳಸಲಾಗುತ್ತಿದೆ.

