ತಿರುವನಂತಪುರ: ಮುಖ್ಯಮಂತ್ರಿಗಳು ಸಚಿವಾಲಯದ ಆವರಣದಲ್ಲಿ ನೆಟ್ಟ ತೆಂಗಿನ ಮರದ ಬಗ್ಗೆ ನಿನ್ನೆ ಸಂತಸ ಹಂಚಿಕೊಂಡರು. ಕೃಷಿ ಇಲಾಖೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು ತಾನು ಐದು ವರ್ಷಗಳ ಹಿಂದೆ ನೆಟ್ಟ ತೆಂಗಿನ ಮರ ಫಲ ನೀಡತೊಡಗಿದೆ ಎಂಬ ವಿಷಯ ಗಮನಕ್ಕೆ ಬರುತ್ತಿದ್ದಂತೆ ಆಹ್ಲಾದ ಪ್ರಕಟಿಸಿದರು. ಯೋಜನೆಯನ್ನು ಉದ್ಘಾಟಿಸಿದ ನಂತರ, ಫಲ ನೀಡತೊಡಗಿದ ತೆಂಗಿನ ಮರಗಳನ್ನು ನೋಡಲು ಮುಖ್ಯಮಂತ್ರಿ ಆಸಕ್ತಿ ವಹಿಸಿದರು.
ಪಿಣರಾಯಿ ವಿಜಯನ್ 2016 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ, ಸಚಿವಾಲಯದ ಆವರಣದಲ್ಲಿ ನೆಟ್ಟ ತೆಂಗಿನಕಾಯಿ ಐದು ವರ್ಷಗಳಲ್ಲಿ ಬೆಳೆದು ಫಲ ನೀಡಲು ತೊಡಗಿದೆ. ಈಗ ಈ ತೆಂಗಿನ ಮರ 18 ಗೊನೆ ತೆಂಗಿನಕಾಯಿಗಳಿಂದ ತುಂಬಿದೆ. ಸಚಿವಾಲಯದ ಆವರಣದಲ್ಲಿ ಮುಖ್ಯಮಂತ್ರಿ ಕೇರಳಶ್ರೀ ತೆಂಗಿನಕಾಯಿ ನೆಟ್ಟಿದ್ದರು. ಕೇರಶ್ರೀ ತಳಿಯ ಈ ತೆಂಗು ಪ್ರಬೇಧವನ್ನು ಅಂದು ಕಾಸರಗೋಡು ಪೀಲಿಕೋಡ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸಚಿವಾಲಯದ ಉದ್ಯಾನದ ಇತರ ಸಸ್ಯಗಳನ್ನೂ ಸಿಎಂ ಪರಿಶೀಲಿಸಿದರು. ಕಳೆದ ವರ್ಷ ಮುಖ್ಯಮಂತ್ರಿ ಪರಿಸರ ದಿನದಂದು ಕೊಟ್ಟುರ್ಕೋಣ ಮಾವು ಸೇರಿದಂತೆ ಹಣ್ಣಿನ ಮರಗಳನ್ನು ನೆಟ್ಟಿದ್ದರು. ಸಚಿವಾಲಯದಲ್ಲಿ ಇದೀಗ ಬೆಳವಣಿಗೆ ಹೊಂದುತ್ತಿವೆ. ಮುಖ್ಯಮಂತ್ರಿಗಳು ಸಚಿವಾಲಯದ ಉದ್ಯಾನ ಮೇಲ್ವಿಚಾರಕರನ್ನು ಶ್ಲಾಘಿಸಿದರು.





