ಬದಿಯಡ್ಕ: ನೀರಿನ ಟ್ಯಾಂಕ್‍ನ ಅಡಿಯಲ್ಲಿ ಜೀವನವನ್ನು ಸವೆಸುತ್ತಿದ್ದ ದೈವನರ್ತಕ ಕಲಾವಿದ ಸುಂದರರ ಬದುಕಿಗೊಂದು ಆಸರೆಯಾಗಿ ಸೇವಾಭಾರತಿ ಹಾಗೂ ಅಭಯ ಸೇವಾನಿಧಿ ಬದಿಯಡ್ಕ ಇವರು ನಿರ್ಮಿಸಿಕೊಟ್ಟ ಮನೆಯ ಗೃಹಪ್ರವೇಶವು ಇಂದು(ಭಾನುವಾರ) ನಡೆಯಲಿದೆ. ಕೇವಲ ಒಂದೇ ತಿಂಗಳಿನಲ್ಲಿ ಸೇವಾಭಾರತಿಯ ಕಾರ್ಯಕರ್ತರ ಶ್ರಮದಲ್ಲಿ ಸುಂದರರಿಗೊಂದು ಆಶ್ರಯ ತಾಣದ ನಿರ್ಮಾಣವಾಗಿದೆ.
ಬದಿಯಡ್ಕ ಗ್ರಾಮಪಂಚಾಯಿತಿಯ ಗೋಳಿಯಡ್ಕ ಕಾಲನಿಯಲ್ಲಿ ವಾಸಿಸುತ್ತಿರುವ ಸುಂದರ ಮತ್ತು ಕುಟುಂಬವು ಕಳೆದ ಅನೇಕ ವರ್ಷಗಳಿಂದ ನೀರಿನ ಟ್ಯಾಂಕಿಯ ಅಡಿಯಲ್ಲಿ ಜೀವಿಸುತ್ತಿದ್ದರು. ಪತ್ನಿ ಜಯಂತಿ, ಮಕ್ಕಳಾದ ಏಳು ವರ್ಷ ಪ್ರಾಯದ ಸಾಕ್ಷಿ, 5 ವರ್ಷ ಪ್ರಾಯದ ವಿಶೇಷ ಚೇತನ ಮಗು ಶಾರ್ವಲ್ಯರೊಂದಿಗೆ ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ರೇಶನ್ ಕಾರ್ಡು ಮೊದಲಾದ ಯಾವುದೇ ದಾಖಲೆಗಳಿಲ್ಲದೆ ಸುಂದರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು.
30 ದಿನದಲ್ಲಿ ನಿರ್ಮಾಣವಾದ `ಅಭಯ' :
ಸೇವಾಭಾರತಿ ಹಾಗೂ ಅಭಯ ಸೇವಾನಿಧಿ ಬದಿಯಡ್ಕ ಇವರು ಇದೀಗ ಅವರಿಗೆ ಕೇವಲ ಒಂದೇ ತಿಂಗಳಿನಲ್ಲಿ `ಅಭಯ'ವನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಂದರರ 10 ಸೆಂಟ್ಸ್ ಸ್ಥಳದಲ್ಲಿ ಮೇ ತಿಂಗಳ 11ರಂದು ಕೆಲಸವನ್ನು ಪ್ರಾರಂಭಿಸಲಾಗಿತ್ತು. ಕಾರ್ಯಕರ್ತರ ಸ್ವಯಂಸೇವೆ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಸುಂದರರಿಗೆ `ಅಭಯ' ಗೃಹ ನಿರ್ಮಿಸಲು ನೆರವಾಯಿತು. ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇವಾಭಾರತಿಯು ಮನೆಯನ್ನು ನಿರ್ಮಿಸಿಕೊಟ್ಟಿದೆ. ಇಂದು ಶುಭಮುಹೂರ್ತದಲ್ಲಿ ಹಿಂದೂ ಸಂಸ್ಕಾರ, ಸಂಪ್ರದಾಯದಂತೆ ಗೃಹಪ್ರವೇಶವನ್ನು ನಡೆಸಿಕೊಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.






